ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ನಿರ್ಧಾರ
ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೋರಾಟಕ್ಕೆ ಕರೆ ಕೊಟ್ಟವರನ್ನಾಗಲಿ, ಸಾರಿಗೆ ನೌಕರರ ಪದಾಧಿಕಾರಿಗಳನ್ನಾಗಲಿ ಸಭೆಗೆ ಆಹ್ವಾನಿಸಿಲ್ಲ. ನಾವೆಲ್ಲರೂ ಜೊತೆಯಾಗಿದ್ದು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಬೇಡಿಕೆ ಈಡೇರುವ ತನಕ ನಿಲ್ಲುವುದಿಲ್ಲವೆಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೋರಾಟಕ್ಕೆ ಕರೆ ಕೊಟ್ಟವರನ್ನಾಗಲಿ, ಸಾರಿಗೆ ನೌಕರರ ಪದಾಧಿಕಾರಿಗಳನ್ನಾಗಲಿ ಸಭೆಗೆ ಆಹ್ವಾನಿಸಿಲ್ಲ. ನಾವೆಲ್ಲರೂ ಜೊತೆಯಾಗಿದ್ದು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಲವು ರಾಜ್ಯಗಳು ಈಗಾಗಲೇ ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಘೋಷಿಸಿವೆ. ಕರ್ನಾಟಕದಲ್ಲೂ ಹೀಗೆಯೇ ಆಗಬೇಕು. ಇಲ್ಲಿಯ ಸಿಬ್ಬಂದಿಗಳಿಗೂ ಸರ್ಕಾರಿ ನೌಕರರ ಸ್ಥಾನಮಾನ ಬೇಕು ಎನ್ನುವುದೇ ನಮ್ಮ ಅಜೆಂಡಾ. ನಾನು ಸಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದು ರೈತರು, ಕಾರ್ಮಿಕರು, ಸಾರಿಗೆ ನೌಕರರು ಎಲ್ಲರೊಂದಿಗೂ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಸರ್ಕಾರ ಸ್ಪಂದಿಸುವ ತನಕವೂ ಹೋರಾಟ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಎಷ್ಟು ಜನರ ಮೇಲೆ ಕೇಸ್ ಹಾಕ್ತಿರಿ, ಎಸ್ಮಾ ಜಾರಿ ಮಾಡ್ತೀರಿ, ಎಷ್ಟು ಜನರನ್ನು ಸಸ್ಪೆಂಡ್ ಮಾಡ್ತೀರಿ? ನಾವು ಬಹಳ ಶಾಂತಿಯುತವಾಗಿ, ಸಂಯಮದಿಂದ ಹೋರಾಟ ಮಾಡಿದ್ದೇವೆ. ಆದರೆ, ನೀವು ಪೊಲೀಸರನ್ನು ಬಿಟ್ಟು ದರ್ಪ ತೋರುತ್ತಿದ್ದೀರಿ. ನಿನ್ನೆ ಪೊಲೀಸರನ್ನ ಬಿಟ್ಟು ಹೋರಾಟಗಾರರಿಗೆ ಅವಮಾನ ಮಾಡಿದ ಫಲವೇ ಇಂದಿನ ಹೋರಾಟ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಜನರು ಸಂಬಂಧಪಟ್ಟ ಸಚಿವರಿಗೆ ಮತ್ತು ಸರ್ಕಾರಕ್ಕೆ ಶಾಪ ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ BMTC ಸಿಬ್ಬಂದಿ ಇನ್ನು ಮುಂದೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡ್ತಿವಿ. 12 ಗಂಟೆಗಳ ಕಾರ್ಯಾವಧಿಯನ್ನು 8 ಗಂಟೆಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ನಮ್ಮನ್ನು 12 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದೆ. ನಮಗೆ 12 ಗಂಟೆ ಕಾಲ ಕೆಲಸ ಮಾಡುವುದಕ್ಕೆ ಆಗೋದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.
ನಿನ್ನೆ ಫ್ರೀಡಂಪಾರ್ಕ್ ಬಳಿ ನಡೆಸಿದ ಧರಣಿಯಲ್ಲಿ ಸಚಿವರು ಬಂದು ನಮ್ಮ ಅಹವಾಲು ಸ್ವೀಕರಿಸದಿದ್ದರೆ ಜೈಲಿಗೆ ಹೋಗಲು ಸಿದ್ಧ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದರು. ಅಷ್ಟಾದ ನಂತರವೂ ಯಾವುದೇ ಸಚಿವರು ಬಾರದಿದ್ದಾಗ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಸ್ ಸಂಚಾರ ನಿಲ್ಲಿಸಲು ಕರೆ ನೀಡಿದ್ದರು. ಅಲ್ಲದೇ ಮುಷ್ಕರಕ್ಕೆ ಕರೆ ನೀಡಿರುವವರನ್ನು ಹೊರತುಪಡಿಸಿ, ಸಾರಿಗೆ ನಿಗಮಗಳ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಲಕ್ಷ್ಮಣ ಸವದಿ ಇಂದು ಸಂಧಾನ ಸಭೆ ನಡೆಸುತ್ತಿರುವ ಬಗ್ಗೆ ನೌಕರರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂಧಾನಸಭೆ ವಿಫಲವಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಬಸ್ಸಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು ಇಂದು ಬೆಳಗ್ಗೆಯಿಂದ ಬಿಎಂಟಿಸಿ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಈಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರೆ ಪರಿಸ್ಥಿತಿ ಬಿಗಡಾಯಿಸುವುದು ಖಚಿತ. ಸರ್ಕಾರ ಮತ್ತು ಪ್ರತಿಭಟನಾಕಾರರು ತಾಳ್ಮೆಯಿಂದ ಒಂದೆಡೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೆ ಒಳ್ಳೆಯದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸಾರಿಗೆ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಸವದಿ ಸಂಧಾನ ಸಭೆ: ನೌಕರರ ಆಕ್ಷೇಪ
Published On - 2:46 pm, Fri, 11 December 20