ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆ.21 ರಂದು ಬಿಜೆಪಿ ಪ್ರತಿಭಟನೆ, ಇದು ರೈತ ಪರ ಹೋರಾಟ ಎಂದ ಸಂಸದೆ ಸುಮಲತಾ

ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರವು ಮಂಡ್ಯದ ಕೆಆರ್​ಎಸ್​ ಜಲಾಶಯದಿಂದ ನೀರು ಹರಿಬಿಡುತ್ತಿದೆ. ಇದನ್ನು ವಿರೋಧಿಸಿ ಆಗಸ್ಟ್ 21 ರಂದು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಪ್ರತಿಭಟನೆಯನ್ನು ರೈತ ಪರ ಹೋರಾಟ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆ.21 ರಂದು ಬಿಜೆಪಿ ಪ್ರತಿಭಟನೆ, ಇದು ರೈತ ಪರ ಹೋರಾಟ ಎಂದ ಸಂಸದೆ ಸುಮಲತಾ
ತಮಿಳುನಾಡಿಗೆ ನೀರು ಬಿಡದಂತೆ ಆ.21 ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ
Edited By:

Updated on: Aug 19, 2023 | 3:02 PM

ಮಂಡ್ಯ, ಆಗಸ್ಟ್ 19: ಕೆಆರ್​ಎಸ್​ ಜಲಾಶಯದಿಂದ (KRS Reservoir) ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 21 ರಂದು ಬಿಜೆಪಿ ಪ್ರತಿಭಟನೆ (BJP Protest) ನಡೆಸಲು ನಿರ್ಧರಿಸಿದೆ. ಮಂಡ್ಯದ ಇಂಡವಾಳು ಬಳಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಂದೆ ಒಳ್ಳೆಯವರಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀರಿನ ಲಭ್ಯತೆ ಬಗ್ಗೆ ಚರ್ಚೆ ಮಾಡದೆ ನೀರು ಬಿಟ್ಟಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಡಿಸಿಎಂ ನಮ್ಮ ರೈತರಿಗೆ ಅನ್ಯಾಯ ಮಾಡಿದ್ದಾರೆ. ಸೋಮವಾರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಈ ಹೋರಾಟದಲ್ಲಿ ಮೈಸೂರು, ಬೆಂಗಳೂರು ಸಂಸದರು ಪಾಲ್ಗೊಳ್ಳುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನೂ ಕರೆಯುತ್ತಿದ್ದೇವೆ. ನಾಲೆಗಳಿಗೆ ನೀರನ್ನ ನಿಲ್ಲಿಸಬಾರದು. ಹೋರಾಟಕ್ಕೆ ರೈತ ಸಂಘಟನೆ, ಕನ್ನಡಪರ ಸಂಘಟನೆಗಳು, ಆಟೋ ಚಾಲಕರಿಗೆ ‌ಮನವಿ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ: ಬಿ.ಎಸ್. ಯಡಿಯೂರಪ್ಪ

ಬೆಳೆಗೆ ನೀರು ಕೊಡುವ ಹಾಗಿಲ್ಲ. ಇದು 2018 ಪ್ರೆಬವರಿ 8 ರಂದು ತೀರ್ಮಾನ ಆಗಿದೆ. ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ತಮಿಳುನಾಡು ಬೆಳೆಗೆ ನೀರು ಕೇಳುತ್ತಿದೆ. ಕಾವೇರಿ ನಿರ್ವಹಣಾ ಸಭೆ ಕರೆದಿದೆ. ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವರು, ಅಧಿಕಾರಿಗಳು ಹೇಳಿಲ್ಲ. ಇಂಡಿಯಾ ಎಂದು ಒಕ್ಕೂಟ ಮಾಡಿಕೊಂಡಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಮತ್ತು ಚಲುವರಾಯಸ್ವಾಮಿ ಸುಳ್ಳುಗಳನ್ನ ಹೇಳುತ್ತಿದ್ದಾರೆ. ಕೇಂದ್ರದ ಕೈಯಲ್ಲಿ‌ ಕೀ ಇದೆ ಎಂದು ಹೇಳುತ್ತಿದ್ದಾರೆ. ಆದರೆ, ಸ್ವಾಟೀನ್ ಜೊತೆ ಶಿವಕುಮಾರ್ ಚೆನ್ನಾಗಿ‌ ಇದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲಿ ಎಂದು ಸವಾಲು ಹಾಕಿದರು.

ಇದು ರಾಜಕೀಯ ಹೋರಾಟ ಅಲ್ಲ, ರೈತರ ಪರ ಹೋರಾಟ

ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ, ಇದು ರಾಜಕೀಯ ಹೋರಾಟ ಅಲ್ಲ, ರೈತರ ಪರ ಹೋರಾಟ ಎಂದಿದ್ದಾರೆ. ಎಲ್ಲರನ್ನೂ ಸೇರಿಸಿಕೊಂಡು ರೈತರಿಗಾಗಿ ಹೋರಾಟ ಮಾಡಬೇಕು. ಕರ್ನಾಟಕ ಸರ್ಕಾರದ ತಮಿಳುನಾಡು ಪರ ನಿರ್ಧಾರದಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ವಿಚಾರದಲ್ಲಿ ನಮ್ಮ ಸರ್ಕಾರ ಏಕೆ ಹೋರಾಟ ಮಾಡುತ್ತಿಲ್ಲ? ರೈತರಿಗೆ ಅನ್ಯಾಯ ಆಗಬಾರದು ಅಂತಾ ನಮ್ಮ ಈ ಹೋರಾಟ. ಕಾವೇರಿ ವಿಚಾರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು.

ಕಾವೇರಿ ನೀರಿನ ಅವಶ್ಯಕತೆ ಇರುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು. ಸರ್ಕಾರ ಒಳ್ಳೆಯ ಹೆಜ್ಜೆ ಹಾಕಬೇಕು. ಅಂಬರೀಶ್ ಅವರು ಕೇಂದ್ರ ಸಚಿವರಾಗಿದ್ದರು. ಆಗ ಕಾಂಗ್ರೆಸ್ ಸರ್ಕಾರ ಇತ್ತು. ರಾಜ್ಯ ಸರ್ಕಾರದ ಪಾತ್ರ ಇಲ್ಲ ಅಂದರೆ ಹೇಗೆ? ಕೇಂದ್ರ ಸಚಿವರ ಜೊತೆಯಲ್ಲಿ ನಾನು ಚರ್ಚಿಸಿದ್ದೇನೆ. ಮಳೆ ಇಲ್ಲ ಅಂದಾಗ ತಮಿಳುನಾಡು ಕ್ಯಾತೆ ತೆಗೆಯುತ್ತದೆ. ತಕ್ಷಣವೇ ಆ್ಯಕ್ಷನ್ ತೆಗೆದುಕೊಳ್ಳುತ್ತದೆ. ಆದರೆ ನಮ್ಮವರು ಯಾಕೆ ಆ ರೀತಿ ಮಾಡಲ್ಲ ಎಂದು ಪ್ರಶ್ನಿಸಿದರು.

ಹೀಗೆ ನೀರು ಬಿಟ್ಟರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ ಎಂದು ಹೇಳಿದ ಸುಮಲತಾ, ನಾವು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ. ರೈತರ ಪರ ಹೋರಾಟ ಮಾಡುತ್ತಿದ್ದೇವೆ. ಸಮಾನ ಮನಸ್ಕರು ಹೋರಾಟದಲ್ಲಿ ಭಾಗವಹಿಸಬಹುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sat, 19 August 23