ಮಂಡ್ಯ: ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನಿನ್ನೆ (ನ.24) ಒಂದೇ ದಿನ ಸುಮಾರು 15 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೀರೆ, ನೀರಿನ ಪೈಪ್ಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಭ್ರಷ್ಟ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. 15 ಸರ್ಕಾರಿ ಅಧಿಕಾರಿಗಳ ಪೈಕಿ ಕೆಆರ್ ಪೇಟೆಯಲ್ಲಿ ಇಂಜಿನಿಯರ್ ಆಗಿರುವ ಕೆ ಶ್ರೀನಿವಾಸ ಕೂಡ ಒಬ್ಬರು. ನಿನ್ನೆ ಇಂಜಿನಿಯರ್ ಕೆ ಶ್ರೀನಿವಾಸ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ದಿನವೇ ಕೆ ಶ್ರೀನಿವಾಸ ಅವರು ಅಂಬಿ ಕಾಯಕ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಸ್ಪಷ್ಟತೆ ನೀಡಿದೆ.
ಅಂಬಿ ಕಾಯಕ ಪ್ರಶಸ್ತಿ ಸ್ವೀಕಾರ ಮಾಡುವ ದಿನವೇ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಹೇಮಾವತಿ ಎಡದಂಡೆ ನಾಲೆ ಯೋಜನೆಯ ಕಾರ್ಯರ್ನಿಹಕ ಇಂಜಿನಿಯರ್ ಆಗಿರುವ ಕೆ ಶ್ರೀನಿವಾಸ ರವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಮಂಡ್ಯದಲ್ಲಿ ನಿನ್ನೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ರೈತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೈರಾಗಿದ್ದರು ಎಂದು ಹೇಳಲಾಗುತಿತ್ತು. ಆದರೆ ಈ ಬಗ್ಗೆ ಸ್ಪಷ್ಟತೆ ನೀಡಿರುವ ಸಂಘ, ನಿನ್ನೆ ನಡೆದ ಅಂಬಿ ಕಾಯಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಂಜಿಯರ್ ಶ್ರೀನಿವಾಸ ರವರಿಗೆ ಸನ್ಮಾನ ಮಾಡಿಲ್ಲ. ರೈಲ್ವೆ ನೌಕರರಾದ ಶ್ರೀನಿವಾಸ್ ರವರಿಗೆ ಸೇವಾ ಕ್ಷೇತ್ರದಲ್ಲಿ ಅಂಬಿ ಕಾಯಕ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.
ವಿವಿಧ ಕ್ಷೇತ್ರಗಳ ಹತ್ತು ಜನರಿಗೆ ಅಂಬಿ ಕಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.
8ರಿಂದ 10 ಎಸಿಬಿ ಅಧಿಕಾರಿಗಳು ಕೆ ಶ್ರೀನಿವಾಸಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಂಜನಗೂಡಿನಲ್ಲಿರುವ ತೋಟದ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂಬ ಮಾಹಿರಿ ತಿಳಿದುಬಂದಿದೆ.
ಅಪಾರ ಆಸ್ತಿ ಪತ್ತೆ
ಕೆಆರ್ ಪೇಟೆ ಹೇಮಾವತಿ ಜಲಾಶಯದ ಇಂಜಿನಿಯರ್ ಶ್ರೀನಿವಾಸ ಮನೆಯಲ್ಲಿ ಎಸಿಬಿ ಕಾರ್ಯಾಚರಣೆಯಲ್ಲಿ ಅಪಾರ ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ 3.5 ಕೋಟಿಯ ಆಸ್ತಿ ಪತ್ತೆಯಾಗಿದೆ. ಒಂದು ಫಾರಂ ಹೌಸ್, ಎಂಟು ಫ್ಲ್ಯಾಟ್‌ನ ಒಂದು ಅಪಾರ್ಟ್‌ಮೆಂಟ್, 2.5 ಎಕರೆ ಹಾಗೂ 1.5 ಎಕರೆ ಜಮೀನು ಪತ್ತೆಯಾಗಿದೆ. ಸುಮಾರ 1.5 ಕೆಜಿ ಚಿನ್ನ 5.5 ಕೆಜಿ ಬೆಳ್ಳಿ ಪದಾರ್ಥಗಳು ದಾಳಿ ವೇಳೆ ಸಿಕ್ಕಿವೆ. 32 ಲಕ್ಷ ರೂಪಾಯಿ ನಗದು ಸೇರಿ ಹಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ
ಮೇಘಾಲಯದಲ್ಲಿ ಕಾಂಗ್ರೆಸ್ಗೆ ಬಿಗ್ ಶಾಕ್; ಮಾಜಿ ಸಿಎಂ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್ಗೆ
ರಮೇಶ್ ಜಾರಕಿಹೊಳಿ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
Published On - 8:55 am, Thu, 25 November 21