ಮಂಡ್ಯ, ಸೆಪ್ಟೆಂಬರ್ 2: ನಿಗದಿತ ಹಣ ಕಟ್ಟಿದರೆ ಡಬಲ್ ಹಣ ಕೊಡುವ ಅಮಿಷ ತೋರಿಸಿ ಹಲವು ಖಾಸಗಿ ಕಂಪನಿಗಳು ಮಂಡ್ಯ ಜಿಲ್ಲೆಯ ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಅಂದಹಾಗೆ ಪಿಎಸಿಎಲ್, ಹಿಂದೂಸ್ತಾನ್, ಅಗ್ರಿಗೋಲ್ಡ್ ಸೇರಿದಂತೆ ಹಲವು ಕಂಪನಿಗಳು 2011ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದವು. ಏಜೆಂಟರುಗಳ ಸಹಾಯದಿಂದ ಗ್ರಾಮೀಣ ಭಾಗದ ಜನರನ್ನ ಸೆಳೆದು ಇಂತಿಷ್ಟು ಹಣ ಕಟ್ಟಿದ್ರೆ ಹಣವನ್ನ ಡಬಲ್ ಕೊಡುವ ಅಮಿಷವೊಡ್ಡಿದ್ದರು. ಅದರಂತೆ ಜಿಲ್ಲೆಯಲ್ಲಿ ಸಾವಿರಾರು ಜನರು ಹತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂ ಹಣವನ್ನ ಪ್ರತಿತಿಂಗಳಂತೆ ಐದಾರು ವರ್ಷ ಕಟ್ಟಿದ್ದಾರೆ. ಕೆಲವಷ್ಟು ಮಂದಿ ಠೇವಣಿಯನ್ನು ಕೂಡ ಇಟ್ಟಿದ್ದಾರೆ.
ಏಜೆಂಟ್ಗಳು ಸಹಾ ಹಣದಾಸೆಗೆ ಹಣವನ್ನ ಖಾಸಗಿ ಕಂಪನಿಗಳಿಗೆ ಕಟ್ಟಿಸಿದ್ದಾರೆ. ಆದರೆ ಆನಂತರ ಹಣವನ್ನ ಕಟ್ಟಿಸಿಕೊಂಡ ಖಾಸಗಿ ಕಂಪನಿಗಳು ತಮ್ಮ ಕಚೇರಿಗಳನ್ನ ಬಂದ್ ಮಾಡಿಕೊಂಡು ಮಂಗಮಾಯವಾಗಿವೆ. ಇದರಿಂದ ಹಣ ಕಟ್ಟಿದ ಜನರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಆದರೆ ಇದೀಗ ಜಿಲ್ಲಾಡಳಿತಕ್ಕೆ ಮನವಿ ಅರ್ಜಿಗಳನ್ನ ಸಲ್ಲಿಸಿದ್ರೆ ಹಣ ವಾಪಾಸ್ ಬರುತ್ತದೆ ಎಂದು ಪ್ರತಿನಿತ್ಯ ಸಾವಿರಾರು ಸಂತ್ರಸ್ತೆಯರು ಅರ್ಜಿಗಳನ್ನ ಸಲ್ಲಿಸಿದ್ದಾರೆ.
ಅಂದಹಾಗೆ, ಹಣ ಕಟ್ಟಿಸಿಕೊಂಡ ಹಲವು ಖಾಸಗಿ ಕಂಪನಿಗಳು ಹಣ ಕಟ್ಟಿಸಿಕೊಂಡಿದಕ್ಕೆ ಬಾಂಡ್ಗಳನ್ನ ನೀಡಿದ್ದಾರೆ. ಪ್ರಾರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಚೇರಿಗಳನ್ನ ತೆರೆದಿದ್ದವು. ಆದರೆ ಆನಂತರ ಕಚೇರಿಗಳನ್ನ ಬಂದ್ ಮಾಡಿಕೊಂಡು ಹೋಗಿವೆ. ಇನ್ನು ಗ್ರಾಮೀಣ ಭಾಗದಲ್ಲಿ ಕಂಪನಿಗಳಿಗೆ ಹಣ ಕಟ್ಟಿಸಿಕೊಂಡ ಏಜೆಂಟ್ ಗಳಿಗೂ ದೊಡ್ಡ ತಲೆ ನೋವಾಗಿದೆ. ಯಾರ ಬಳಿ ಹೋಗಿ ಕೇಳುವುದು ಎಂಬುದಂತೆ ಆಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರೆ ಹಣ ಸಿಗಬಹುದು ಎಂದು ಊಟ ನಿದ್ರೆ ಇಟ್ಟು ಸರತಿ ಸಾಲಿನಲ್ಲಿ ಅರ್ಜಿಗಳನ್ನ ಸಲ್ಲಿಸಿದ್ದಾರೆ.
ಇನ್ನು ಸಂತ್ರಸ್ತರ ಅಸಹಾಯಕತೆಯನ್ನ ಬಳಸಿಕೊಂಡ ಕೆಲವಷ್ಟು ಸಂಘಸಂಸ್ಥೆಗಳು ಹಣ ಕೊಡಿಸುವುದಾಗಿ ನಂಬಿ ಮೋಸ ಹೋದ ಜನರಿಂದಲೇ ಹಣವನ್ನ ಕೂಡ ವಸೂಲಿ ಮಾಡುತ್ತಿವೆ. ಇನ್ನು ಪ್ರಾರಂಭದಲ್ಲಿ ಅರ್ಜಿಗಳನ್ನ ಸ್ವೀಕಾರ ಮಾಡಿದ ಜಿಲ್ಲಾಡಳಿತ ಇದೀಗ ಅರ್ಜಿಗಳನ್ನ ಸ್ವೀಕಾರ ಮಾಡುವುದನ್ನ ಕೂಡ ನಿಲ್ಲಿಸಿದೆ. ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ರಚನೆ ಆಗಿ, ಅರ್ಜಿಗಳನ್ನ ಸ್ವೀಕರಿಸಲು ಅಧಿಕೃತ ಆದೇಶ ಹೊರಡಿಸುವವರೆಗೂ ಅರ್ಜಿಗಳ ಸ್ವೀಕಾರ ಸ್ಥಗಿತ ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ: ಗ್ರಾಮದ ಅಪ್ರಾಪ್ತ ಬಾಲಕರಿಂದ ಕಿರುಕುಳ; ನೇಣಿಗೆ ಶರಣಾದ 15ರ ಬಾಲಕಿ
ಒಟ್ಟಾರೆ ಡಬಲ್ ಹಣದ ಆಮಿಷ ತೋರಿಸಿ ಜನರಿಂದ ದುಡ್ಡು ಕಟ್ಟಿಸಿಕೊಂಡ ಹಲವು ಖಾಸಗಿ ಕಂಪನಿಗಳು ಗ್ರಾಮೀಣ ಭಾಗದ ಜನರಿಗೆ ಮಹಾನ್ ದೋಖಾ ಮಾಡಿವೆ. ಈಗಾಲಾದರೂ ನಮ್ಮ ಹಣ ವಾಪಾಸ್ ಬರಬಹುದು ಎಂಬ ನೀರಿಕ್ಷೆಯಲ್ಲಿ ಸಾವಿರಾರು ಸಂತ್ರಸ್ತರು ಇದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವ ಕ್ರಮ ತೆಗೆದುಕೊಂಡು ಸಂತ್ರಸ್ತರ ನೆರವಿಗೆ ನಿಲ್ಲುತ್ತೆ ಕಾದು ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ