ಮಂಡ್ಯ, ಡಿ.8: ಹುಲಿ ಉಗುರು ಧರಿಸಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh) ಅವರ ವಿವಾಹದ ವಿಚಾರ ಜೋರಾಗಿಯೇ ಚರ್ಚೆ ನಡೆದಿತ್ತು. ಇದೀಗ ಅವರಿಗೆ ಹಳ್ಳಿಕಾರ್ ಒಡೆಯ ಎಂಬ ಹೆಸರು ಕೊಟ್ಟ ಹಿನ್ನೆಲೆ ಆ ತಳಿಯ ಗೋವು ಸಾಕಾಣಿಕೆ ಮಾಡುತ್ತಿರುವ ರೈತರು ಸಿಡಿದೆದ್ದಿದ್ದಾರೆ.
ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ಅವರಿಂದ ಅಪಮಾನ ಆಗಿದೆ ಎಂದು ಆರೋಪಿಸಿರುವ ರೈತರು, ಹಳ್ಳಿಕಾರ್ ಒಡೆಯರ್ ಹೆಸರಿಗೆ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ನಲ್ಲಿ ಡಿ.10 ರಂದು ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಟಿ ಏರ್ಪಡಿಸಿದ ರೈತರು, ವರ್ತೂರ್ ಸಂತೋಷ್ಗೂ ಆಹ್ವಾನ ಕೊಟ್ಟಿದ್ದಾರೆ.
ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ ಎಂದು ಮಂಡ್ಯದ ರೈತ ರವಿ ಪಾಟೀಲ್ ಹೇಳಿದ್ದಾರೆ.
ಹಳ್ಳಿಕಾರ್ ಗೋವುಗಳನ್ನ ಸಾಕುತ್ತಿರುವ ಮೂಲ ರೈತರು ಎಷ್ಟು ಜನ ಇದ್ದಾರೆ? ವರ್ತೂರ್ ಸಂತೋಷ್ ಅವರಿಗೆ ಹಳ್ಳಿಕಾರ್ ಒಡೆಯ ಹೆಸರು ಇಟ್ಟಿರುವುವುದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಅನ್ನೋದು ಸರಿಯಲ್ಲ ಎಂದರು.
ಕೆಲವು ಯೂಟ್ಯೂಬ್ಗಳಲ್ಲಿ ಹಳ್ಳಿಕಾರ್ ಒಡೆಯ ಎಂದು ಬಿಂಬಿಸುವುದು ತಪ್ಪು. ಮಂಡ್ಯದಲ್ಲಿ ಹಳ್ಳಿಕಾರ್ ತಳಿಯ ಬಗ್ಗೆ ಚರ್ಚಾ ವೇದಿಕೆ ಸಿದ್ದಪಡಿಸಿದ್ದೇವೆ. ಹಿರಿಯ ರೈತರು, ಪಶು ವೈದ್ಯರು, ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ತಕ್ಷಣವೇ ಸ್ಪಷ್ಟೀಕರಣ ನೀಡಿ ಆ ಹೆಸರನ್ನು ಬಳಸದೇ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ