ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ತನಿಖೆ ಆರಂಭ

| Updated By: ರಮೇಶ್ ಬಿ. ಜವಳಗೇರಾ

Updated on: Aug 08, 2023 | 8:03 AM

ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ತನಿಖೆ ಆರಂಭ
ಚಲುವರಾಯಸ್ವಾಮಿ
Follow us on

ಮಂಡ್ಯ, (ಆಗಸ್ಟ್ 08): ಮಂಡ್ಯದ (Mandya) 7 ಸಹಾಯಕ ಕೃಷಿ ನಿರ್ದೇಶಕರು ಕೃಷಿ ಸಚಿವ ಚಲುವರಾಯಸ್ವಾಮಿ(Chaluvaraya swamy)  ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವ ಪತ್ರ ವೈರಲ್ ಆಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ದೂರಿನ ಪತ್ರವನ್ನು ಹಿಡಿದುಕೊಂಡು ವಿರೋಧ ಪಕ್ಷ ಬಿಜೆಪಿ, ಸರ್ಕಾರದ ಮೇಲೆ ಮುಗಿಬಿದ್ದಿದೆ. ಆದ್ರೆ, ಇದನ್ನು ಆಡಳಿತರೂಢ ಕಾಂಗ್ರೆಸ್​ ನಾಯಕರು ಅಲ್ಲಗಳೆದಿದ್ದಾರೆ. ಹೀಗೆ ಈ ಪ್ರಕರಣ ರಾಜೀಯವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ V.S.ಅಶೋಕ್​​ ಅವರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಕುರಿತು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆ, ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು

ದೂರಿನ‌ ಸಾರಂಶ ಇಲ್ಲಿದೆ

13-04-22 ರಿಂದ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೃಷಿ ಸಚಿವರು ಸಹಾಯಕ ‌ಕೃಷಿ ನಿರ್ದೇಶಕರಿಂದ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನ ಪತ್ರ ವೈರಲ್ ಆಗಿದ್ದು, ಅದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಕುರಿತು ತನಿಖೆ ಮಾಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರು ಅರ್ಜಿಯ ವಿಚಾರವಾಗಿ ಸಹಾಯಕ ಕೃಷಿ ನಿರ್ದೇಶಕರನ್ನ ವಿಚಾರ ಮಾಡಿದ್ದೇನೆ. ದೂರು ಅರ್ಜಿಯನ್ನ ರಾಜ್ಯಪಾಲರಿಗೆ ನೀಡಿಲ್ಲ. ನಮ್ಮ ಸಿಬ್ಬಂದಿಗೂ ತಿಳಿದಿಲ್ಲ. ಕೃಷಿ ಸಚಿವರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಯಾವುದೇ ಕಿರುಕುಳ ನೀಡಿಲ್ಲವೆಂದು ತಿಳಿಸಿರುತ್ತಾರೆ. ದೂರು ಅರ್ಜಿಯ ಸಹಿಗಳು ನಮ್ಮದಲ್ಲ ಎಂದು ಹೇಳಿದ್ದಾರೆ. ದುರುದ್ದೇಶದಿಂದ ರಾಜ್ಯಪಾಲರಿಗೆ ದೂರು ನೀಡಿರುತ್ತಾರೆ. ಈ ರೀತಿ ಅಪಪ್ರಚಾರ ಮಾಡಿ ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವ ವ್ಯಕ್ತಿಗಳನ್ನ ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ವಿ ಎಸ್ ದೂರು ನೀಡಿದ್ದಾರೆ.

ಮಂಡ್ಯ ಕಾಂಗ್ರೆಸ್ ಶಾಸಕರು, ಎಂಎಲ್​ಸಿಗಳಿಂದ ದೂರು

ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರವಾಗಿ ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಎಸ್ ಪಿಗೆ ದೂರು ನೀಡಿದ್ದಾರೆ. ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗೌಡ , ಎಮ್ ಎಲ್ ಸಿಗಳಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ ಅವರು ಮಂಡ್ಯ ಎಸ್​ಪಿಗೆ ದೂರು ನೀಡಿದ್ದು, ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಲ್ಲಿ ನಕಲಿ ಸಹಿ ಮಾಡಿ ಷಡ್ಯಂತ್ರ ರೂಪಿಸಿ ರಾಜ್ಯಪಾಲರಿಗೆ ಸುಳ್ಳು ದೂರು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕೃಷಿ ಸಚಿವರ ವಿರುದ್ಧ ಏಳು ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಕಲಿ ಸಹಿ ಬಳಸಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದರ ಹಿಂದೆ ರಾಜಕೀಯ ‌ಷಡ್ಯಂತ್ರ ಅಡಗಿದೆ. ಅಧಿಕಾರಿಗಳ ಹೆಸರಿನಲ್ಲಿ ದೂರುಗಳನ್ನು ಸೃಷ್ಟಿಸಿ ಬ್ಲಾಕ್ ಮೇಲ್ ತಂತ್ರ ಮಾಡಿ ಜನಪ್ರತಿನಿಧಿಗಳನ್ನ ಬೆದರಿಸುವ ಹುನ್ನಾರವಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಅಡಗಿದೆ. ನಕಲಿ ಪತ್ರದ ಸೂತ್ರಧಾರನನ್ನು ಪತ್ತೆ ಹಚ್ಚಿ ಕ್ರಿಮಿನಲ್ ‌ಮೊಕದ್ದಮೆ ದಾಖಲಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸ್ರು

ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖುದ್ದು ಅಡಿಷನಲ್ ಎಸ್ ಪಿ ತಿಮ್ಮಯ್ಯ ಅವರು ಮಂಡ್ಯ ಕೃಷಿ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದು, ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಆ ಬಳಿಕ ಮಂಡ್ಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲೂ ಮಾಹಿತಿ ಪಡೆದಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ