ಸತ್ಯಾಗ್ರಹ ಸೌಧ; ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮೂಲಭೂತ ಸೌಲಭ್ಯಗಳ ಕೊರತೆ

| Updated By: preethi shettigar

Updated on: Aug 15, 2021 | 11:32 AM

Independence day 2021: ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಧ್ವಜ ಸತ್ಯಾಗ್ರಹ ಸ್ಮಾರಕ ನಿರ್ಮಾಣದ ಚಿಂತನೆ ಮಾಡುವ ಮೂಲಕ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರಲ್ಲದೇ 1979ರ ಅಕ್ಟೋಬರ್ 26 ರಂದು ಸತ್ಯಾಗ್ರಹ ಸೌಧ ಉದ್ಘಾಟನೆ ಮಾಡಿದರು.

ಸತ್ಯಾಗ್ರಹ ಸೌಧ; ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮೂಲಭೂತ ಸೌಲಭ್ಯಗಳ ಕೊರತೆ
ಸತ್ಯಾಗ್ರಹ ಸೌಧ
Follow us on

ಮಂಡ್ಯ: ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ, ಚೈತನ್ಯ ತುಂಬಿದ್ದ ಸ್ಥಳವೆಂದರೆ ಹಳೇ ಮೈಸೂರು ಭಾಗದಲ್ಲಿನ ಸತ್ಯಾಗ್ರಹ ಸೌಧ. ಇಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಂದಿನ ಮೈಸೂರು ಕಾಂಗ್ರೆಸ್ ಮೊದಲು ತನ್ನ ಧ್ವಜ ಹಾರಿಸಿತ್ತು. ಭಾರತೀಯ ಇತಿಹಾಸದಲ್ಲಿ ತನ್ನದೇ ಆದ ಮಹತ್ವ ಪಡೆದುಕೊಂಡಿರುವ ಈ ಸ್ಥಳ ವೈಭವದಿಂದ ಇರಬೇಕಿತ್ತು. ಆದರೆ, ದುರಾದೃಷ್ಟವಶಾತ್ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೆ ಈ ಸ್ಥಳ ಸೊರಗುತ್ತಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರದಲ್ಲಿರುವ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಧ್ವಜ ಸತ್ಯಾಗ್ರಹ ಇಂದು ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತವಾಗಿದೆ. ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿರುವ ಈ ಸೌಧ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿರುವ ಸಂದರ್ಭದಲ್ಲಿ ತನ್ನ ಗತಕಾಲದ ವೈಭವದಿಂದ ತುಂಬಿ ತುಳುಕಬೇಕಿತ್ತು. ಆದರೆ ಇಂದು ಸರಿಯಾದ ನಿರ್ವಹಣೆ ಇಲ್ಲದ ಸ್ಥಿತಿಗೆ ತಲುಪಿದೆ.

ಶಿವಪುರ ಧ್ವಜ ಹೋರಾಟದ ಇತಿಹಾಸ
1927 ರ ಸುಮಾರಿಗೆ ಮಹಾತ್ಮ ಗಾಂಧೀಜಿ ಅವರು ಬೆಂಗಳೂರು ಬಳಿಯ ನಂದಿಗಿರಿ ಧಾಮಕ್ಕೆ ಆಗಮಿಸಿದ್ದು. ಆ ಸಮಯದಲ್ಲೇ ಅವರು ಮಂಡ್ಯದ ಮಾರ್ಗವಾಗಿ ಮೈಸೂರು, ನಂಜನಗೂಡಿಗೂ ತೆರಳಿದ್ದರು. ಅಲ್ಲದೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಚರಕ ಕೇಂದ್ರವೊಂದನ್ನು ಸ್ಥಾಪಿಸಿದ್ದರು. ಮಹಾತ್ಮ ಗಾಂಧೀಜಿ ಅವರು ಈ ಮಾರ್ಗದಲ್ಲಿ ಹೋಗಿದ್ದರಿಂದ ಪ್ರೇರಣೆಗೊಂಡಿದ್ದ ಅವರ ಅನಯಾಯಿಗಳು ರಾಜ್ಯದಲ್ಲಿ ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿದ್ದರು. ಅದಕ್ಕಾಗಿ ಅವರೆಲ್ಲರೂ ಸೇರಿ ಮೈಸೂರು ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದರು.

1938 ರ ಫೆಬ್ರವರಿ ತಿಂಗಳಲ್ಲಿ ಮೈಸೂರಿನಲ್ಲಿ ಸಭೆ ಸೇರಿದ ಹೋರಾಟಗಾರರು ಮೈಸೂರು ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರ ಕೂಟಸಭೆಯೊಂದನ್ನು ನಡೆಸಿ, ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕೆಂಬ ನಿರ್ಧಾರಕ್ಕೆ ಬಂದರು. ಅದರಂತೆ 1938 ರ ಏಪ್ರಿಲ್​ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರದಲ್ಲಿ ಸತ್ಯಾಗ್ರಹ ನಡೆಸುವ ಮೂಲಕ ರಾಷ್ಟ್ರಧ್ವಜವನ್ನು ಮೈಸೂರು ಭಾಗದಲ್ಲಿ ಮೊದಲ ಬಾರಿಗೆ ಹಾರಿಸುವಲ್ಲಿ ಯಶಸ್ವಿಯಾದರು. 1938 ರ ಏಪ್ರಿಲ್ 09, 10 ಹಾಗೂ 11 ಮೂರು ದಿನಗಳ ಕಾಲ ನಡೆದ ಈ ಸತ್ಯಾಗ್ರಹದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 40 ಸಾವಿರ ಜನರು ಪಾಲ್ಗೊಂಡಿದ್ದರು ಎನ್ನುವುದೇ ಒಂದು ವಿಶೇಷ.

ಅಂದು ದೇಶ ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗುತ್ತಿದ್ದ ಕಾಲ. ಅದೇ ಸಮಯಕ್ಕೆ ಮಹಾತ್ಮ ಗಾಂಧೀಜಿ ಅವರು ರಾಜ್ಯಕ್ಕೆ ಬಂದಿದ್ದರು. ಇದೇ ಮಾರ್ಗವಾಗಿ ಮೈಸೂರಿಗೂ ತೆರಳಿದ್ದರು. ಇದರಿಂದ ಪ್ರೇರಣೆಗೊಂಡ ಹೋರಾಟಗಾರರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮೈಸೂರು ಸಂಸ್ಥಾನ ಬ್ರಿಟೀಷರ ಅಧೀನದಲ್ಲಿದ್ದುದ್ದನ್ನು ಸಹಿಸಲಿಲ್ಲ. ಇದರಿಂದಾಗಿ ಇಲ್ಲಿಂದಲೇ ಹೋರಾಟ ನಡೆಸಬೇಕೆಂಬ ಉದ್ದೇಶದಿಂದ ಮೈಸೂರು ಕಾಂಗ್ರೆಸ್ ಸ್ಥಾಪಿಸುವ ಮೂಲಕ ಹಳೆ ಮೈಸೂರು ಭಾಗದಲ್ಲಿ ರಾಷ್ಟ್ರಕೂಟವನ್ನು ರಚಿಸಿ ಶಿವಪುರದಲ್ಲಿ 3 ದಿನಗಳ ಕಾಲ ಸತ್ಯಾಗ್ರಹ ನಡೆಸುವಲ್ಲಿ ಯಶಸ್ವಿಯಾದರು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಸಿದ್ದರಾಜು ತಿಳಿಸಿದ್ದಾರೆ.

ಮೈಸೂರು ಮಹಾರಾಜರ ಆಡಳಿತವಿದ್ದರಿಂದ ಶಿಂಷಾ ನದಿಯ ದಂಡೆಯ ಮೇಲಿರುವ ಶಿವಪುರದಲ್ಲಿ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆದು ಕಾಂಗ್ರೆಸ್ ಧ್ವಜ ಹಾರಿಸಿದೆ. ಆದರೆ ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ದಂಡಾಧಿಕಾರಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಿಷೇಧ ಹೇರಿದ್ದರು. ಆದರೆ ನಿಷೇಧ ಉಲ್ಲಂಘಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಗೆ ಹಳೇ ಮೈಸೂರು ಭಾಗದಲ್ಲಿ ನಾಂದಿ ಹಾಡಿದರು.

ಈ ಹೋರಾಟದಲ್ಲಿ ಸಿದ್ದಲಿಂಗಯ್ಯ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಮಂಡ್ಯದ ಗೋಪಾಲಶೆಟ್ರು, ಎಂ.ಜಿ.ಬಂಡಿಗೌಡರು, ಎಚ್.ಸಿ.ದಾಸಪ್ಪ, ಎಸ್.ರಂಗಯ್ಯ ಸೇರಿದಂತೆ ಹಲವಾರು ಹೋರಾಟಗಾರರು ಪಾಲ್ಗೊಂಡಿದ್ದರು. ಆದರೆ ಧ್ವಜ ಸತ್ಯಾಗ್ರಹ ನಡೆದು 36 ವರ್ಷ ಕಳೆದರೂ ಸಹ ಸ್ಮಾರಕ ಸೌಧ ನಿರ್ಮಿಸುವ ಚಿಂತನೆ ಮಾಡಿರಲ್ಲಿಲ್ಲ. ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಧ್ವಜ ಸತ್ಯಾಗ್ರಹ ಸ್ಮಾರಕ ನಿರ್ಮಾಣದ ಚಿಂತನೆ ಮಾಡುವ ಮೂಲಕ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರಲ್ಲದೇ 1979ರ ಅಕ್ಟೋಬರ್ 26 ರಂದು ಸತ್ಯಾಗ್ರಹ ಸೌಧ ಉದ್ಘಾಟನೆ ಮಾಡಿದರು.

ಧ್ವಜ ಸತ್ಯಾಗ್ರಹ ಸೌಧದ ಹಿನ್ನಲೆಯನ್ನು ತಿಳಿಸುವುದರ ಜತೆಗೆ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕು. ಅಲ್ಲದೆ, ಇತಿಹಾಸದಲ್ಲಿ ತನ್ನದೇ ಮಹತ್ವ ಪಡೆದುಕೊಂಡಿರುವ ಈ ಶಿವಪುರ ಸತ್ಯಾಗ್ರಹ ಸೌಧದ ರಕ್ಷಣೆಗೂ ಕ್ರಮ ಕೈಗೊಳ್ಳಬೇಕು ಎಂದು ಕೆ. ಟಿ. ಚಂದು ಹೇಳಿದ್ದಾರೆ.

ಅಂದು ಹೋರಾಟ ನಡೆಸಿದ ನಾಯಕರ ಸ್ಮರಣಾರ್ಥವಾಗಿ ಹಾಗೂ ಹೋರಾಟದ ಕಿಚ್ಚಿನ ನೆನಪಿಗಾಗಿ ನಿರ್ಮಾಣವಾಗಿರುವ ಧ್ವಜ ಸತ್ಯಾಗ್ರಹ ಇಂದು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ ಎನ್ನುವುದು ಮಾತ್ರ ಸತ್ಯ.

ವರದಿ: ರವಿ ಲಾಲಿಪಾಳ್ಯ

ಇದನ್ನೂ ಓದಿ:

ಚಿತ್ರದುರ್ಗ: ಗಾಂಧಿವಾದಿಗಳ ನೆಲೆಬೀಡು ತುರುವನೂರು; ಸ್ವಾತಂತ್ರ್ಯ ಹೋರಾಟದ ತವರೂರಿನಲ್ಲಿದೆ ಗಾಂಧಿ ಗುಡಿ

Independence Day 2021: ರಾಷ್ಟ್ರಧ್ವಜದ ಬಟ್ಟೆ ತಯಾರಾಗುವುದು ಎಲ್ಲಿ ಗೊತ್ತಾ?

Published On - 11:30 am, Sun, 15 August 21