ಮಂಡ್ಯ: ಗ್ರಾ.ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ‘ಓಟಾಕಿರದಿದ್ದರೆ ನನ್ನ ಮನೆ ಹಾಳಾಗಲಿ’ ಎಂದು ಸದಸ್ಯರಿಂದ ಆಣೆ ಮಾಡಿಸಿದ ಪರಾಜಿತ ಅಭ್ಯರ್ಥಿ; ವಿಡಿಯೋ ವೈರಲ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 4:59 PM

‘ಓಟಾಕಿರದಿದ್ದರೆ ನನ್ನ ಮನೆ ಹಾಳಾಗಲಿ, ನನ್ನ ವಂಶ ನಿರ್ವಂಶ ಆಗಲಿ ಎಂದು ಪರಾಜಿತ ಅಭ್ಯರ್ಥಿಯಿಂದ ಸದಸ್ಯರನ್ನು ಕರೆದುಕೊಂಡು ಹೋಗಿ ಆಣೆ ಮಾಡಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಮಂಡ್ಯ, ಆ.20: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಓಟಾಕಿರದಿದ್ದರೆ ನನ್ನ ಮನೆ ಹಾಳಾಗಲಿ, ನನ್ನ ವಂಶ ನಿರ್ವಂಶ ಆಗಲಿ ಎಂದು ಅಧ್ಯಕ್ಷ ಸ್ಥಾನ ವಂಚಿತ ಅಭ್ಯರ್ಥಿ ಇತರ ಸದಸ್ಯರಿಂದ ಆಣೆ ಮಾಡಿಸಿದ ಘಟನೆ ಮಂಡ್ಯ(Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತಿ(Honnavara Grama Panchayat) ಯಲ್ಲಿ ನಡೆದಿದೆ. ಹೌದು, ಇದೇ ತಿಂಗಳ 9 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ 10 ಬೆಂಬಲಿತ ಸದಸ್ಯರ ಜೊತೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನರೇಂದ್ರ ಎಂಬುವವರು ರೆಸಾರ್ಟ್ ರಾಜಕೀಯ ಮಾಡಿದ್ದರು.

ಇಬ್ಬರಿಗೂ ಸಮ ಮತ; ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ

ಇನ್ನು ಚುನಾವಣೆಯಲ್ಲಿ ನರೇಂದ್ರ ಹಾಗೂ ಪ್ರತಿಸ್ಪರ್ಧಿ ಚೇತನ್ ಎಂಬುವವರಿಗೂ ಸಮವಾಗಿ 9 ಮತಗಳು ಬಂದಿತ್ತು. ಈ ಹಿನ್ನಲೆ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆಯನ್ನು ಮಾಡಲಾಗಿ, ಲಾಟರಿಯಲ್ಲಿ ಚೇತನ್ ಎಂಬುವವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಕೋಪಗೊಂಡ ನರೇಂದ್ರ ಅವರು ಕೆ.ಆರ್ ಪೇಟೆ ತಾಲೂಕಿನ ಸಂತೆಬಾಚಹಳ್ಳಿಯ ಉಲ್ಲಾಳಮ್ಮ ದೇವಾಲಯದಲ್ಲಿ ಸದಸ್ಯರಿಂದ ಪೂಜೆ ಸಲ್ಲಿಸಿ, ‘ಅಧ್ಯಕ್ಷ ಸ್ಥಾನಕ್ಕೆ ನರೇಂದ್ರಗೆ, ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯಮ್ಮಗೆ ಓಟ್ ಹಾಕಿದ್ವಿ. ಓಟ್ ಹಾಕದೆ ಇದ್ದರೆ ನಮ್ಮ ಮನೆ ಉಳಿಯೋದು ಬೇಡ, ನಮ್ಮ ವಂಶ ಉಳಿಯದು ಬೇಡ, ನಮ್ಮ ಮಕ್ಕಳು ಉಳಿಯದು ಬೇಡ, ನಾವೂ ಉಳಿಯದು ಬೇಡ. ಆ ಶಿಕ್ಷೆ ಕೊಡವ್ವ ಎಂದು ಆಣೆ ಪ್ರಮಾಣ ಮಾಡಿದ್ದಾನೆ. ಇನ್ನು ಆಣೆ ಪ್ರಮಾಣದ ವಿಡಿಯೋ ಇದೀಗ ಬಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲು; ಕೈ ಮುಖಂಡ ಮಿಥುನ್ ರೈ ಮತ್ತು ಬೆಂಬಲಿಗರಿಂದ ಗಲಾಟೆ

ಇನ್ನು ಕಳೆದ ಜುಲೈ 23 ರಂದು ಗ್ರಾ‌ಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಹಿನ್ನಲೆ ಸದಸ್ಯೆಯೊಬ್ಬರು ಮತ್ತೋರ್ವ ಸದಸ್ಯನಿಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಶರ್ಟ್ ಹರಿದ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸೋತ ಹತಾಶೆಯಲ್ಲಿ ಸದಸ್ಯೆ ಸುಧಾ ಜಿ.ಎನ್. ಎಂಬುವವರು ‘ನನಗೆ ಮತ ಹಾಕಿಲ್ಲ, ಹಾಗಾಗಿ ನಾನು ಸೋತಿದ್ದೇನೆಂದು ಗ್ರಾಮ ಪಂಚಾಯತಿ ಕಚೇರಿ ಒಳಗೆ ನುಗ್ಗಿ ಹಲ್ಲೆ ಮಾಡಿದ್ದರು. ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಮಣಿ ಎಂಬುವವರು ಅಧ್ಯಕ್ಷೆಯಾಗಿ ಗೆಲುವು ಕಂಡಿದ್ದರು. ಈ ಹಿನ್ನಲೆ ಹಲ್ಲೆ ಮಾಡಿ ಆರೋಪಿ ಸುಧಾ‌ ತಲೆ ಮರೆಸಿಕೊಂಡಿದ್ದರು. ಈ ಕುರಿತು ಸುಧಾ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sun, 20 August 23