AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ.. ಯಾಕೆ?

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಕ್ಕುಪತ್ರ ಹಾಗೂ ಜೆಟ್ಟಿ ಸಮಸ್ಯೆಗಳು ದಶಕಗಳಿಂದ ಬಗೆಹರಿಯದೇ ಹಾಗೆಯೇ ಉಳಿದಿವೆ. ಇದನ್ನು ಖಂಡಿಸಿ ಗ್ರಾಮಸ್ಥರು ಗ್ರಾ.ಪಂ. ಚುನಾವಣೆಯನ್ನೇ ಬಹಿಷ್ಕಾರ ಮಾಡುತ್ತಿದ್ದಾರೆ.

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ.. ಯಾಕೆ?
ಆಯೇಷಾ ಬಾನು
|

Updated on: Dec 10, 2020 | 1:35 PM

Share

ಉಡುಪಿ: ಗ್ರಾಮ ಪಂಚಾಯತಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದ ಎರಡು ದಿನಗಳಲ್ಲಿ 294 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಮಧ್ಯೆ ಜಿಲ್ಲೆಯಲ್ಲಿ ಒಂದು ಗ್ರಾ. ಪಂ. ವ್ಯಾಪ್ತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಕ್ಕುಪತ್ರ ಹಾಗೂ ಜೆಟ್ಟಿ ಸಮಸ್ಯೆಗಳು ದಶಕಗಳಿಂದ ಬಗೆಹರಿಯದೇ ಹಾಗೆಯೇ ಉಳಿದಿವೆ. ಇದನ್ನು ಖಂಡಿಸಿ ಗ್ರಾಮಸ್ಥರು ಗ್ರಾ.ಪಂ. ಚುನಾವಣೆಯನ್ನೇ ಬಹಿಷ್ಕಾರ ಮಾಡುತ್ತಿದ್ದಾರೆ.

ಪಂಚಾಯತಿ ವ್ಯಾಪ್ತಿಯ ಕೋಡಿಕನ್ಯಾಣ, ಕೋಡಿತಲೆ, ಕೋಡಿ ಹೊಸಬೆಂಗ್ರೆ, ಕೋಡಿಬೆಂಗ್ರೆ ಗ್ರಾಮಗಳ ಮತದಾರರು ಸಭೆ ಸೇರಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧಾರ ಪ್ರಕಟಿಸಿದ್ದಾರೆ. ಈ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸ್ಥಳೀಯ ಮುಖಂಡರೂ ಭಾಗವಹಿಸಿ ಗ್ರಾಮಸ್ಥರ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಸಿ ಆರ್ ಜೆಡ್ ನಿಯಮದಿಂದಾಗಿ ಹಕ್ಕು ಪತ್ರ ಸಿಗುತ್ತಿಲ್ಲ: ರಾಜಕೀಯ ಪಕ್ಷಗಳ ಬೆಂಬಲಿತರು ಚುನಾವಣೆಗೆ ನಾಮಪತ್ರ ಸಲ್ಲಿಸದಿರಲು ಹಾಗೂ ಯಾರಾದರೂ ವೈಯಕ್ತಿಕವಾಗಿ ಉಮೇದುವಾರಿಕೆ ಸಲ್ಲಿಸಿದರೆ ನಾಮಪತ್ರ ಹಿಂಪಡೆಯಲು ಮನವೊಲಿಸಲು ನಿರ್ಧರಿಸಲಾಗಿದೆ. ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುವ ನೂರಾರು ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ಹಕ್ಕುಪತ್ರವಿಲ್ಲದೇ ಪರಿತಪಿಸುತ್ತಿವೆ. ನದಿ ಹಾಗೂ ಸಮುದ್ರ ತೀರದಲ್ಲಿರುವ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕರಾವಳಿ ನಿಯಂತ್ರಣ ವಲಯ (CRZ) ಕಠಿಣ ನಿಯಮದಿಂದಾಗಿ ಹಕ್ಕು ಪತ್ರ ಸಿಗುತ್ತಿಲ್ಲ.

ಈ ಕುರಿತು ಸಾಕಷ್ಟು ಸಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರೊಂದಿಗೆ ಈ ಪ್ರದೇಶದಲ್ಲಿ ಜೆಟ್ಟಿ ಅಭಿವೃದ್ಧಿ ಹಲವು ವರ್ಷಗಳಿಂದ ಕನಸಾಗಿ ಉಳಿದಿದೆ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಚುನಾವಣೆ ಬಂದಾಗ ಆಶ್ವಾಸನೆ ನೀಡಿ ಚುನಾವಣೆ ಮುಗಿದ ಮೇಲೆ ಮರೆಯುತ್ತಾರೆ. ಆದ್ದರಿಂದ ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕಾಫಿನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ: ನಾಮಪತ್ರ ಸಲ್ಲಿಸಲು ಗ್ರಾ. ಪಂ. ಕಡೆ ಸುಳಿಯದ ಅಭ್ಯರ್ಥಿಗಳು..ಏಕೆ?