
ಮಂಡ್ಯ, ನವೆಂಬರ್ 05: ತಮ್ಮಿಂದ ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಮಂಡ್ಯ ಡಿಸಿ ಕಚೇರಿ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸರ್ಕಾರದಿಂದ ಪರಿಹಾರ ಮಂಜೂರಾಗಿರುವ ದಾಖಲೆ ಬಹಿರಂಗಗೊಂಡಿದ್ದು, 1977ರಲ್ಲಿ ಸ್ವಾಧೀನವಾದ 1 ಎಕರೆ 13 ಗುಂಟೆ ಜಮೀನಿಗೆ ಭೂಸ್ವಾಧೀನ ಅಧಿಕಾರಿ ಪರಿಹಾರ ಮಂಜೂರು ಮಾಡಿದ್ದಕ್ಕೆ ಸಾಕ್ಷಿ ನೀಡಲಾಗಿದೆ. ಮೃತ ಮಂಜೇಗೌಡ ಆರೋಪದ ಬಗ್ಗೆ ದಾಖಲೆ ನೀಡಲಾಗಿದ್ದು, 1977ರಲ್ಲಿ ವಶಪಡಿಸಿಕೊಂಡ ಜಮೀನಿಗೆ 1,165 ರೂ. ಪರಿಹಾರವನ್ನು ಪಾಂಡವಪುರ ಭೂಸ್ವಾಧೀನ ಅಧಿಕಾರಿ ಮಂಜೂರು ಮಾಡಿದ್ದರು. ಮಂಜೇಗೌಡ ತಾತ ಬೋರೇಗೌಡಗೆ ಪರಿಹಾರ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ವಶಪಡಿಸಿಕೊಂಡ ಜಮೀನಿಗೆ ಸರ್ಕಾರ ಪರಿಹಾರ ನೀಡಿಲ್ಲವೆಂದು ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ ಆರೋಪಿಸಿದ್ದರು. 1970ರ ದಶಕದಲ್ಲಿ ತಮ್ಮ ತಾತನಿಗೆ ಸೇರಿದ ಸುಮಾರು 2.5 ಎಕರೆ ಜಮೀನು ವಶಕ್ಕೆ ಪಡೆದಿದ್ದ ಸರ್ಕಾರ, ಆಶ್ರಯ ಯೋಜನೆ ಅಡಿಯಲ್ಲಿ ಸೈಟ್‌ಗಳ ರೂಪದಲ್ಲಿ ಹಂಚಿಕೆ ಮಾಡಿದೆ. ಹೀಗಾಗಿ ಗೋಮಾಳ ಜಾಗವನ್ನು ಪರಿಹಾರವಾಗಿ ನೀಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ಸೋಮವಾರ (ನ.3) ಡಿಸಿ ಕಚೇರಿಯಲ್ಲಿ ಕಾದಿದ್ದ ಅವರು, ಸ್ಪಂದನೆ ಸಿಗದ ಹಿನ್ನಲೆ ಮಂಗಳವಾರ (ನ.4) ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್‌ನಲ್ಲಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಅವರನ್ನು ರವಾನಿಸಿದ್ದರು. ಘಟನೆಯಲ್ಲಿ ದೇಹದ 60 ಪ್ರತಿಶತಕ್ಕಿಂತ ಹೆಚ್ಚು ಭಾಗ ಸುಟ್ಟಿದ್ದ ಕಾರಣ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಇದನ್ನೂ ಓದಿ: ಮಂಡ್ಯ ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು
1970ರ ದಶಖದಲ್ಲಿ ತಮ್ಮ ಕುಟುಂಬದ ಎರಡೂವರೆ ಎಕರೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಪರಿಹಾರಕ್ಕೆ ಬದಲಾಗಿ ನಮ್ಮ ತಂದೆ ಗೋಮಾಳ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಮಲ್ಲೇಹಳ್ಳಿ ಎಲ್ಲೆ ಬಳಿ ಎರಡೂವರೆ ಎಕರೆ ಗೋಮಾಳ ಜಾಗವನ್ನು ಮಂಜೂರು ಮಾಡುವಂತೆ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಎಂದು ಮೃತ ಮಂಜೇಗೌಡರ ಪುತ್ರ ಪುನೀತ್ ಹೇಳಿದ್ದಾರೆ. ಆದರೆ ಎರಡೂವರೆ ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಂಡ ಬಗ್ಗೆ ಕುಟುಂಬ ಯಾವುದೇ ದಾಖಲೆ ನೀಡಿಲ್ಲ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.