ಮಂಡ್ಯ ಜಿಲ್ಲೆಯ ಗಾಣಾಳು ಫಾಲ್ಸ್ನಲ್ಲಿ ಕರುಣಾಜನಕ ದೃಶ್ಯ ಕಂಡು ಬಂದಿದೆ. ಸೆಲ್ಫಿ ಕ್ರೇಜ್ನಿಂದಾಗಿ ಇಬ್ಬರು ಯುವಕರು ಹೆಣವಾಗಿದ್ದಾರೆ. ಬೆಂಗಳೂರಿನ ಶಾಮ್ವೆಲ್ ಜೇಕಬ್ ಹಾಗೂ ಸಿಬಲ್ ತಾಮಸ್ ಎಂಬ 21 ವರ್ಷದ ಯುವಕರು ಮೃತ ದುರ್ದೈವಿಗಳು.
ಹೆಣವಾಗಿ ಮಲಗಿರುವ ಇಬ್ಬರೂ ಯುವಕರು ಚೆನ್ನಾಗಿ ಓದ್ತಾ ಇದ್ರು. ಎಲ್ಲಾ ಸರಿಯಿದ್ದಿದ್ರೆ ಇಷ್ಟೊತ್ತಿಗೆ ಮಾಸ್ಟರ್ ಡಿಗ್ರಿಗೆ ಅವರು ಸೇರಬೇಕಿತ್ತು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಬೆಂಗಳೂರಿನ ಶಾಮ್ವೆಲ್ ಜೇಕಬ್ ಹಾಗೂ ಸಿಬಲ್ ತಾಮಸ್ ಎಂಬ 21 ವರ್ಷದ ಯುವಕರು ಸೆಲ್ಫಿ ಕ್ರೇಜ್ಗೆ ಬಲಿಯಾಗಿದ್ದಾರೆ. ಅಂದಹಾಗೆ ಮಂಡ್ಯದ KRS ಭರ್ತಿಯಾದಾಗ ಹೆಚ್ಚಿನ ನೀರನ್ನು ಹೊರಬಿಟ್ಟಾಗಲೆಲ್ಲಾ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಥೇಟ್ ಗಗನಚುಕ್ಕಿ-ಭರಚುಕ್ಕಿ ಜಲಪಾತದ ರೀತಿಯಲ್ಲೇ ಹಲಗೂರು ಸಮೀಪದ ಗಾಣಾಳು ಗ್ರಾಮದ ಸಮೀಪದಲ್ಲಿ ಜಲಪಾತವೊಂದಿದೆ. ಮುತ್ತತ್ತಿ ಅರಣ್ಯ ಪ್ರದೇಶ ವ್ಯಾಪ್ತಿಯ ಈ ಫಾಲ್ಸ್ ಕುರಿತು ಬಹುತೇಕರಿಗೆ ಗೊತ್ತೇ ಇಲ್ಲ. ಹೀಗಾಗಿ ಇಲ್ಲಿಗೆ ಬರೋದು ಬೆರಳಣಿಕೆಯಷ್ಟು ಪ್ರವಾಸಿಗರು. ಆದ್ರೆ ಗಾಣಾಳು ಫಾಲ್ಸ್ ನೋಡೋದಕ್ಕೆ ಬಂದಿದ್ದ ಇಬ್ಬರು ಪ್ರಾಣಸ್ನೇಹಿತರು ಸೆಲ್ಫಿ ವಿಡಿಯೋ ಮಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.
ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ಬಲಿ
ಬೆಂಗಳೂರಿನ ಶಾಮ್ವೆಲ್ ಜೇಕಬ್ ಹಾಗೂ ಸಿಬಲ್ ತಾಮಸ್ ಇತ್ತೀಚೆಗೆ ಡಿಗ್ರಿ ಮುಗಿಸಿ ಮಾಸ್ಟರ್ ಡಿಗ್ರಿಗೆ ಸೇರಿದ್ದರು. ಇನ್ನೇನು ತರಗತಿಗೆ ಹೋಗಬೇಕು ಅಂತಾ ಸಿದ್ಧರಾಗ್ತಿದ್ರು. ಆದ್ರೆ ಮಂಡ್ಯ ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ರು. ಹೀಗೆ ಮೊದಲು ಗಗನಚುಕ್ಕಿಗೆ ಭೇಟಿ ನೀಡಿದ್ದ ಶಾಮ್ವೆಲ್ ಜೇಕಬ್ ಹಾಗೂ ಸಿಬಲ್ ತಾಮಸ್, ನಂತರ ಗಾಣಾಳುಗೆ ಬಂದಿದ್ದಾರೆ. ಗಾಣಾಳು ಫಾಲ್ಸ್ ಬಳಿ ಸೆಲ್ಫಿ ವಿಡಿಯೋಗೆ ಮುಂದಾಗಿದ್ದಾರೆ. ಈ ವೇಳೆ ಒಬ್ಬರು ಜಲಪಾತದ ನೀರಿಗೆ ಬಿದ್ದಿದ್ದು, ಆತನನ್ನ ರಕ್ಷಿಸಲು ಹೋದ ಮತ್ತೊಬ್ಬ ಯುವಕನೂ ಮೃತಪಟ್ಟಿದ್ದಾನೆ.
ಶನಿವಾರದಿಂದಲೂ ಸ್ಕೂಟರ್ ಅಲ್ಲೇ ನಿಂತಿದ್ದನ್ನ ಗಮನಿಸಿದ್ದ ಫಾರೆಸ್ಟ್ ವಾಚರ್ಸ್ ಪರಿಶೀಲನೆ ನಡೆಸಿದಾಗಲೇ ವಿಚಾರ ಬಯಲಾಗಿದ್ದು. ಕೂಡಲೇ ಶವಗಳಿಗಾಗಿ ತಡಕಾಡಿದಾಗ ಇಬ್ಬರ ದೇಹ ಸಿಕ್ಕಿದೆ. ಒಟ್ನಲ್ಲಿ ಅಪರಿಚಿತ ಜಾಗಕ್ಕೆ ಹೋಗಿ, ಜಲಪಾತದ ಆಳ ಅರಿಯದೆ ಇಬ್ಬರು ಸ್ನೇಹಿತರು ಜೀವವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತವೆ ಸರಿ.
ಇದನ್ನೂ ಓದಿ: ಚುನಾವಣೆ ಸಂದರ್ಭ ವೈದ್ಯರ ನಿವೃತ್ತಿ ವಯಸ್ಸನ್ನು ಏಕ್ದಂ 5 ವರ್ಷ ಏರಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್