ಮಂಡ್ಯ, ನ.4: ಅಂಬೇಡ್ಕರ್ ಭವನದಲ್ಲಿ ಹಾಕಿದ್ದ ಶಂಕುಸ್ಥಾಪನಾ ಶೀಲಾಫಲಕದ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಹೆಸರಿದ್ದ ಶೀಲಾಫಲಕ ತೆರವುಗೊಳಿಸಿದ್ದಕ್ಕೆ ಜೆಡಿಎಸ್ ಕಿಡಿಕಾರುತ್ತಿದ್ದು, ಮಳವಳ್ಳಿಯಲ್ಲಿ ಹಾಲಿ ಶಾಸಕ ಎಂ. ಪಿ. ನರೇಂದ್ರಸ್ವಾಮಿ (M.P.Narendraswamy) ಹಾಗೂ ಮಾಜಿ ಶಾಸಕ ಡಾ. ಅನ್ನದಾನಿ (Dr.Annadani) ನಡುವೆ ವಾಕ್ಸಮರ ನಡೆದಿದೆ.
ಶಾಸಕ ನರೇಂದ್ರಸ್ವಾಮಿ ಅವರು ಅಂಬೇಡ್ಕರ್ ಭವನದಲ್ಲಿ ಹಾಕಿದ್ದ ಶೀಲಾಫಲಕವನ್ನು ತೆಗೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಮುಖಂಡರು, ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ದ್ವೇಷಕ್ಕೆ ಅಧಿಕಾರಿಗಳಿಗೆ ಹೆದರಿಸಿ ರಾತ್ರೋರಾತ್ರಿ ಶೀವಾಫಲಕ ತೆಗೆಸಿದ್ದಾರೆಂದು ಆರೋಪಿಸಿದ್ದಾರೆ.
2007 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು. 2012ರಲ್ಲಿ ಶಾಸಕರಾಗಿದ್ದ ನರೇಂದ್ರಸ್ವಾಮಿ ಮತ್ತೆ ಶಂಕುಸ್ಥಾಪನೆ ನೆರವೇರಿಸಿದ್ದರು. ಉದ್ಘಾಟನೆಗೊಂಡಾಗ ಕೇವಲ 2012ರ ಶಂಕುಸ್ಥಾಪನೆ ಫಲಕ ಹಾಕಿಸಿದ್ದರು. 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅನ್ನದಾನಿ ಅವರು 2007ರ ಹಳೇ ಶಿಲಾಫಲಕವನ್ನೂ ಹಾಕಿಸಿದ್ದರು.
ಇದನ್ನೂ ಓದಿ: ಬಡವರಿಗಾಗಿ ನಿರ್ಮಾಣವಾಗುತ್ತಿರೋ ಮನೆಗಳು ಹಾಳುಬಿದ್ದಿವೆ, ಹಣದ ಅಭಾವ ಇದೆ ಎಂದ ಮಂಡ್ಯ ಶಾಸಕ ರವಿ ಗಣಿಗಾ
ಅಂದಿನಿಂದ ಮಳವಳ್ಳಿಯಲ್ಲಿ ಆರಂಭವಾಗಿದ್ದ ಶಂಕುಸ್ಥಾಪನೆ ಫಲಕ ರಾಜಕೀಯ ಈಗಲೂ ಮುಂದುವರಿದಿದೆ. ಫಲಕ ತೆರವಿಗೆ ಸಿಎಂ ಸಿದ್ದರಾಮಯ್ಯ ಮೂಲಕವೇ ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸೂಚನೆ ಹಿನ್ನೆಲೆ ಕುಮಾರಸ್ವಾಮಿ ಹೆಸರಿದ್ದ ಫಲಕವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸಿಎಂ ನಡೆಸಿದ ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿತ್ತು.
ಶಿಲಾಫಲಕ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡಿರುವ ಮಾಜಿ ಶಾಸಕ ಅನ್ನದಾನಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ ಮಾಡಿದ ಕಲ್ಲನ್ನ ರಾತ್ರಿ ವೇಳೆ ತೆರವು ಮಾಡಲಾಗಿದೆ. ತಾಕತ್ತು, ಧೈರ್ಯ ಇದ್ದರೇ ಬೆಳಗಿನ ಜಾವ ತೆಗೆಸಿದ್ದರೆ ನೀನು ಗಂಡು ಮಗ, ತಾಕತ್ತು ಇದೆ ಎಂದು ಹೇಳುತ್ತಿದೆ. ನೀನೊಬ್ಬ ಹೇಡಿ, ಕಳ್ಳನ ರೀತಿಯಲ್ಲಿ ತೆಗೆಸಿದ್ದೀಯಾ ಎಂದು ಕಿಡಿ ಕಾರಿದರು.
ವಾಗ್ದಾಳಿ ಮುಂದುವರಿಸಿದ ಅವರು, ಕಲ್ಲನ್ನು ನಿಮ್ಮ ಎದೆ ಮೇಲೆ ಹಾಕಿದ್ದೇವಾ? ನಿಮ್ಮ ಮನೆಯ ಕಾಂಪೌಂಡ್ಗೆ ಹಾಕಿದ್ದೇವಾ? ನಿಮ್ಮಪ್ಪನ ಜಮೀನನ ಮೇಲೆ ಹಾಕಿದ್ದೇವಾ? ನಿಮ್ಮ ದುಡ್ಡಲ್ಲಿ ಅಂಬೇಡ್ಕರ್ ಭವನ ಕಟ್ಟಿಸಿದ್ದೇವಾ? ನಿಮ್ಮಪ್ಪನದ್ದ ಅಂಬೇಡ್ಕರ್ ಭವನ? ನಿಮ್ಮಪ್ಪನ ದುಡ್ಡಲ್ಲಿ ಕಟ್ಟಿಸಿದ್ದಿದ್ದರೆ ನಾನು ಕಾಲಿಡುವುದಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸಿಎಂ, ಉಸ್ತುವಾರಿ ಸಚಿವರು ನಿಮ್ಮ ಮಾತು ಕೇಳುತ್ತಾರೆ ಎಂದರೆ ಯಾಕೆ ರಾತ್ರಿವೇಳೆ ಕಲ್ಲನ್ನ ತೆಗಿಸಿದೆ? ಶಾಸಕನ ಆಡಳಿತದಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ. ನಾಚಿಕೆ ಆಗಬೇಕು ನಿನ್ನ ಆಡಳಿತಕ್ಕೆ. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮನೆಯಲ್ಲಿ ವೇಶ್ಯವಾಟಿಕೆ ಮಾಡಿದರೆ ರೇಡ್ ಆಗುತ್ತೆ ಎಂದು ಟೆಂಪೋದಲ್ಲಿ ವೇಶ್ಯವಾಟಿಕೆ ಮಾಡಿಸುತ್ತಿದ್ದಾನೆ. ಇದಾ ನಿನ್ನ ಆಡಳಿತ, ದುರಹಂಕಾರ ಜಾಸ್ತಿ ದಿನ ನಡೆಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಯಾರೇನೆ ಮೈತ್ರಿ ಮಾಡಿಕೊಂಡರೂ ನನ್ನ ನಿಲುವಿಗೆ ನಾನು ಬದ್ಧ: ಸುಮಲತಾ ಅಂಬರೀಶ್, ಸಂಸದೆ
ಕುಮಾರಸ್ವಾಮಿ ಹೆಸರು ಹೇಳಿದರೆ ಸಹಿಸಿಕೊಳ್ಳಲು ಆಗಲ್ಲ. ಕ್ಷೇತ್ರದಲ್ಲಿ ಅನಾಚಾರ ನಡೆಯುತ್ತಿದೆ. ನಿನ್ನ ರೀತಿ ಆರು ತಿಂಗಳು ಅನರ್ಹರಾಗಿಲ್ಲ. ಕುಮಾರಸ್ವಾಮಿ ಬಳಿ ಹಣ ಪಡೆದು ನಿಮ್ಮ ಪಕ್ಷಕ್ಕೆ ಬರುತ್ತೇನೆ ಎಂದು ಕೈ ಕೊಟ್ಟು ಹೋಗಿದ್ದು ಮರೆತಿದ್ದಾರೆ. ಕ್ಷೇತ್ರದಲ್ಲಿ ಶಾಸಕ ಸ್ಥಾನವನ್ನ ವ್ಯಾಪಾರ ಮಾಡುತ್ತಿದ್ದಾರೆ. ನಿನಗೆ ಹೆದರುವವರು ಯಾರು ಇಲ್ಲ. ನಮ್ಮ ತಪ್ಪಿನಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ಕಾನೂನಾತ್ಮಕವಾಗಿ ಶಂಕುಸ್ಥಾಪನೆ ಕಲ್ಲು ತೆರವುಗೊಳಿಸಿ 2007ರಲ್ಲಿ ಶಂಕುಸ್ಥಾಪನೆ ಮಾಡಿರುವುದು ಸುಳ್ಳಾದರೇ ನಾನು ನಿಮ್ಮ ಮನೆಯಲ್ಲಿ ಜೀತ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಪರಮ ಭ್ರಷ್ಟ, ನೀಚ, ದುಷ್ಟ ಶಾಸಕ ನರೇಂದ್ರಸ್ವಾಮಿ. ದುರ್ಯೋದನ ಕಥೆ, ಶಾಸಕನಿಗೆ ಆಗಲಿದೆ. ರಾಜಕೀಯ ವ್ಯಭಿಚಾರಿ, ಮೂರು ಪಕ್ಷದಲ್ಲಿ ತಿರುಗಾಡಿದ್ದೀರಿ. ಮಂತ್ರಿಸ್ಥಾನ ನೀಡಿಲ್ಲವೆಂದು ಸಿದ್ದರಾಮಯ್ಯನವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಿ. ದುರ್ಯೋದನ ರೀತಿಯಲ್ಲಿ ಶಾಸಕನ ಅಂತ್ಯವಾಗಲಿದೆ. ಆರು ತಿಂಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ? ನಾನು ತಂದ ಅನುದಾನಕ್ಕೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಅನ್ನದಾನಿ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ನರೇಂದ್ರಸ್ವಾಮಿ, ಆತ ಮಾತನಾಡಿರೋದು ತುಂಬ ಸಂತೋಷ. ಶೂರತ್ವ, ಧೀರತ್ವದ ಬಗ್ಗೆ ಮಾತನಾಡಿದ್ದಾನೆ. ನಮ್ಮ ತಂದೆಯ ಬಗ್ಗೆ ಕೂಡ ಮಾತನಾಡಿದ್ದಾನೆ. ನನ್ನ ಬಗ್ಗೆ ಸವಾಲು ಹಾಕಿದ್ದಾನೆ. ರಾತ್ರಿದ್ದು ಇನ್ನು ಇಳಿದಿಲ್ಲ ಅನ್ನಿಸುತ್ತದೆ. ನಾನು ಅವನ ಮೂಲಕ್ಕೆ ಹೋದರೇ ಎಲ್ಲಿಗೋ ಹೋಗುತ್ತದೆ. ಎಚ್ಚರಿಕೆಯಿಂದ ಮಾತನಾಡಲಿ. ನಾನು ಅವನ ಹುಟ್ಟು, ಅವನ ತಂದೆ, ವಂಶದ ಬಗ್ಗೆ ನಾನು ಮಾತನಾಡಿಲ್ಲ ಎಂದು ಹೇಳಿದರು.
ಆ ಅಯೋಗ್ಯನನ್ನ ನನ್ನ ಮನೆಯಲ್ಲಿ ಜೀತಕ್ಕೆ ಇಟ್ಟುಕೊಳ್ಳುವುದಿಲ್ಲ. ಆತನಿಗೆ ಜೀತ ಮಾಡಿ ರೂಢಿಯಾಗಿರಬೇಕು. ಅಂಬೇಡ್ಕರ್ ಭವನದ ಶಂಕುಸ್ಥಾಪನೆ ಬಗ್ಗೆ ಸದನದಲ್ಲೇ ಉತ್ತರಕೊಟ್ಟಿದ್ದಾರೆ. ನಾನು ದಾಖಲೆಯನ್ನ ಸೃಷ್ಟಿ ಮಾಡಿಲ್ಲ. ಅಂಬೇಡ್ಕರ್ ಭವನದ ಜಾಗ 2007ರಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಕೊಡಲಾಗಿತ್ತು. ಬೋಗಸ್ ದಾಖಲೆ ಕೊಟ್ಟು ಶಂಕುಸ್ಥಾಪನೆ ಮಾಡಿದ ಮುಟ್ಟಾಳ ಅವನು. ಎಲಬಿಲ್ಲದ ನಾಲಿಗೆ ಎಂದು ಮಾತನಾಡುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ನೋ ವೇ ಚಾನ್ಸೆ ಇಲ್ಲ: ಜೆಡಿಎಸ್-ಬಿಜೆಪಿ ಮೈತ್ರಿಗೆ ಖಡಕ್ ಸಂದೇಶ ರವಾನಿಸಿದ ಸುಮಲತಾ ಅಂಬರೀಶ್
ಕುಮಾರಸ್ವಾಮಿ ಆಗಲಿ, ಈತನಾಗಲಿ ಒಂದೇ ಒಂದು ಏತನೀರಾವರಿ ಮಾಡಿಲ್ಲ. ಅವನ ರೀತಿನ ಹುಚ್ಚ ನಾನಲ್ಲ. ಅಯೋಗ್ಯನ ತರಾ ಮಾತನಾಡಿದ್ದಾನೆ. ಇದೀಗ ಪೊಲೀಸ್ ಅಧಿಕಾರಿಗಳನ್ನ ಬದಲಾವಣೆ ಮಾಡಿ ರೇಡ್ ಮಾಡಿಸುತ್ತಿದ್ದೇನೆ. ನನ್ನ ಬಗ್ಗೆ ಮಾತನಾಡಿರುವ ಆ ಪಿತಾಮಹನಿಗೆ ತೋರಿಸುತ್ತೇನೆ. ಅವನ ಜೊತೆ ಇರುವ ಹಲವರು ಭೂ ಹಗರಣದಲ್ಲಿ ಇದ್ದಾರೆ. ಸಾವಿರಾರು ಎಕರೆ ಭೂಮಿಯನ್ನ ಆಕ್ರಮವಾಗಿ ಖಾತೆ ಮಾಡಿದ್ದಾನೆ ಎಂದು ಆರೋಪಿಸಿದರು.
ಪುರಗಾಲಿ ಏತನೀರಾವರಿ ಯೋಜನೆ ಯಾಕೆ ಮಾಡಲಿಲ್ಲ? ನಿಮ್ಮಪ್ಪನ ದುಡ್ಡಲ್ಲಿ ಮಾಡಬೇಕಿತ್ತಾ ಯಾಕೆ ಮಾಡಲಿಲ್ಲ? ಎಲ್ಲಿ ಮಲಗಿದ್ದೆ ಐದು ವರ್ಷ? ಎಲ್ಲಿ ಬೀಗ ಹಾಕಿಸಿಕೊಂಡಿದ್ದೆ? ನನ್ನನ್ನ ಕೆರಳಿಸಿದರೆ ಅವನ ಬುಡಕ್ಕೆ ಬರುತ್ತೇನೆ ಶುಷಾರ್ ಎಂದು ಎಚ್ಚರಿಕೆ ನೀಡಿದರು.
ನಾನು ಪಕ್ಷೇತರವಾಗಿ ಗೆದ್ದು ಬಂದವನು. ಎರಡು ಫೋಟೋ ಇಲ್ಲ ಅಂದರೆ ಈತನನ್ನ ನಾಯಿನೂ ಮೂಸಲ್ಲ. ನನ್ನ ಅರ್ಧ ಭಾಗ ಅವನು, ಅನುದಾನ ತಂದಿದ್ದರೇ ರಾಜಕೀಯ ಬಿಟ್ಟು ಕಸ ಗೂಡಿಸುತ್ತೇನೆ. ಅವನ ಪಟಾಲಂ ಆಕ್ರಮ ಮಾಡಿದ್ದಾರೆ. ಅವನ ಪಿಹೆಚ್ಡಿಯನ್ನ ಯಾರೋ ಬರೆದುಕೊಟ್ಟಿದ್ದಾರೆ. ಮಾರ್ಯಾದೆಯಾಗಿ ಇದ್ದರೇ ಸರಿ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ