ಮಂಗಳೂರು: ಲಾಕ್ಡೌನ್ನಲ್ಲಿ ವ್ಯಾಪಾರ ವಹಿವಾಟು ನಿಂತಿದೆ. ಇನ್ನು ಅಕ್ರಮ ವಹಿವಾಟಿಗೆ ಅವಕಾಶವೇ ಇಲ್ಲ. ಗಾಂಜಾ ಗಿರಾಕಿಗಳಿಗೆ ಮನೆಯಲ್ಲಿ ಕೂತು ಕೂತು ಗಾಂಜಾ ಸಿಗದಂತಾಗಿದೆ. ಇಂತವರ ಮತ್ತಿಗಾಗಿ ಗಾಂಜಾ ಸಪ್ಲೇ ಮಾಡುತ್ತಿದ್ದ ತಂಡ ಅಂದರ್ ಆಗಿದೆ. ಅಗತ್ಯ ವಸ್ತುವಿನ ಸೋಗಿನಲ್ಲಿ ಹೊರ ರಾಜ್ಯದಿಂದ ಗಾಂಜಾ ತಂದು 4 ಜಿಲ್ಲೆಗಳಿಗೆ ಸಪ್ಲೇ ಮಾಡುತ್ತಿದ್ದ ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ನಲ್ಲಿ ನಿಯತ್ತಿನಿಂದ ಜೀವನ ಮಾಡುವವರಿಗೆ ಒಂದಲ್ಲ ಒಂದು ತೊಂದರೆಯಾಗುತ್ತಿದೆ. ಆದರೆ ನಶೆಯ ಮತ್ತಿನಲ್ಲಿ ತೇಲುತ್ತಿದ್ದವರಿಗೆ ಈ ಲಾಕ್ಡೌನ್ನಿಂದಾಗಿ ಡ್ರಗ್ಸ್, ಗಾಂಜಾ, ಅಫೀಮು ಸಿಗದೆ ಒದ್ದಾಡುತ್ತಿದ್ದಾರೆ. ಅವರ ಮತ್ತನ್ನು ಏರಿಸಲು ಗಾಂಜಾ ತಂಡ ಅಗತ್ಯ ವಸ್ತುಗಳ ಹೆಸರಿನಲ್ಲಿ ಸಪ್ಲೇ ಮಾಡುತ್ತಿತ್ತು. ಆಲ್ ಇಂಡಿಯಾ ಪರ್ಮಿಟ್ ಇರುವ ಕೆ.ಎಫ್.ಡಿಯ ಮೀನು ಸಾಗಾಟ ಮಾಡುವ ಟ್ರಕನ್ನು ಬಳಿಸಿ ಆಂಧ್ರ ಪ್ರದೇಶದಿಂದ ಗಾಂಜಾ ತರುತ್ತಿತ್ತು. ದಕ್ಷಿಣ ಕನ್ನಡ, ಕೊಡಗು, ಹಾಸನ, ಕೇರಳದ ಕಾಸರಗೋಡಿನ ಗಾಂಜಾ ಗಿರಾಕಿಗಳಿಗೆ ಮಾರಾಟ ಮಾಡುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ದರೋಡೆ ಗ್ಯಾಂಗ್ನ ತನಿಖೆ ವೇಳೆ ಮಾಹಿತಿ
ಮೂಡುಬಿದಿರೆ ದರೋಡೆ ಗ್ಯಾಂಗ್ನ ತನಿಖೆ ವೇಳೆ ಸಿಕ್ಕ ಸಣ್ಣ ಸುಳಿವಿನಿಂದ ಗಾಂಜಾ ಬರುತ್ತಿರುವ ಮಾಹಿತಿ ಕಲೆ ಹಾಕಿ ಉಳ್ಳಾಲ ಮತ್ತು ಮೂಡುಬಿದಿರೆ ಪೊಲೀಸರು ಲಾರಿ ಸಮೇತ 200 ಕೆ.ಜಿ ಗಾಂಜಾವನ್ನು ಹಿಡಿದಿದ್ದಾರೆ. ಇನ್ನು ಈ ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಕಾರು ಹಾಗೂ ಲಾರಿಯಲ್ಲಿದ್ದ 3 ತಲವಾರು, 1 ಚೂರಿ, 1 ಲಾರಿ ಮತ್ತು 1 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ತಂಡ ಕರ್ನಾಟಕದಲ್ಲಿ ಗಾಂಜಾ ಅಡ್ಡವನ್ನು ಮಾಡಿತ್ತು. ಕೇರಳದ ಕಾಸರಗೋಡಿನ ಮೊಹಮ್ಮದ್ ಫಾರೂಕ್, ಮಂಜೇಶ್ವರದ ಮೊಯ್ದೀನ್ ನವಾಜ್, ಕೊಡಗಿನ ಸೈಯದ್ ಮೊಹಮ್ಮದ್, ಮಂಗಳೂರಿನ ಮೊಹಮ್ಮದ್ ಅನ್ಸಾರ್ನನ್ನು ಬಂಧಿಸಿದ್ದಾರೆ. ಇನ್ನು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಾರಕಾಸ್ತ್ರಗಳನ್ನು ಕೂಡ ಆಂಧ್ರ ಪ್ರದೇಶದಿಂದ ತರಿಸಿದ್ದಾಗಿ ಹೇಳಿದ್ದಾರೆ. ಇನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತದೆ ಎಂದು ಟಿವಿ9 ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ಮಾಡಿದ ತಂಡಕ್ಕೆ 25 ಸಾವಿರ ರಿವಾರ್ಡ್ ಕೊಡಲಾಗಿದೆ. ಗಾಂಜಾದಿಂದ ಲಾಕ್ಡೌನ್ನಲ್ಲಿ ಮತ್ತೇರಿಸಿಕೊಳ್ಳಬಹುದು ಅಂತಾ ತಿಳಿದಿದ್ದ ಗಾಂಜಾ ಗಿರಾಕಿಗಳ ಆಸೆಗೆ ಖಾಕಿ ತಣ್ಣೀರು ಎರಚಿ ಗಾಂಜಾ ಗ್ಯಾಂಗ್ನನ್ನು ಹೆಡೆಮುರಿ ಕಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಇದನ್ನೂ ಓದಿ
ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು
ಹಣ ನೀಡಿಲ್ಲ ಎಂದು ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ.. ಮಗ ಅರೆಸ್ಟ್
(Mangalore Police have seized four people who were supplying marijuana to Karnataka from an out of state)