ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ: ಬಿ.ಎಸ್. ಯಡಿಯೂರಪ್ಪ

| Updated By: Rakesh Nayak Manchi

Updated on: Aug 18, 2023 | 9:14 PM

ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಂಗಳೂರು ನಗರದ ಸಂಸದರು ಹಾಗೂ ಶಾಸಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಚರ್ಚೆಯಾಗಿದ್ದು, ಆಗಸ್ಟ್ 23 ರಂದು ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ: ಬಿ.ಎಸ್. ಯಡಿಯೂರಪ್ಪ
ಆಗಸ್ಟ್ 23 ರಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
Follow us on

ಬೆಂಗಳೂರು, ಆಗಸ್ಟ್ 18: ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ನಿವಾಸದಲ್ಲಿ ಬೆಂಗಳೂರು ನಗರದ ಸಂಸದರು ಹಾಗೂ ಶಾಸಕರ ಸಭೆ ನಡೆಸಲಾಯಿತು. ಬಳಿಕ ಮಾತನಾಡಿದ ಯಡಿಯೂರಪ್ಪ, ರಾಜ್ಯ ಕಾಂಗ್ರೆಸ್ (Congress Govt) ವಿರುದ್ಧ ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ನಿಷ್ಕ್ರಿಯತೆ ವಿರುದ್ಧ ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಜೆಪಿಯಿಂದ ಬೃಹತ್​ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿಯ ಐದಾರು ಸಾವಿರ ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟಿಸುತ್ತೇವೆ ಎಂದರು.

ಇದನ್ನೂ ಓದಿ: ಆಪರೇಷನ್ ಹಸ್ತ: ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಡಿಕೆ ಶಿವಕುಮಾರ್

ರಾಜ್ಯ ಕಾಂಗ್ರೆಸ್​ ಸರ್ಕಾರ ಪಾಪರ್ ಆಗಿದೆ ಎಂದು ಹೇಳಿದ ಯಡಿಯೂರಪ್ಪ, ರಾಜ್ಯಾದ್ಯಂತ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದರು. ಬಿಜೆಪಿಗೆ ಪಕ್ಷಾಂತರವಾದ ಶಾಸಕರು ಮತ್ತೆ ಕಾಂಗ್ರೆಸ್ ಸೇರುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಪಕ್ಷ ಬಿಡುವ ಬಗ್ಗೆ ಒಬ್ಬಿಬ್ಬರು ಚಿಂತಿಸಿದ್ದಾರೆ, ಅದರ ಬಗ್ಗೆ ಮಾತಾಡುತ್ತೇವೆ ಎಂದರು.

ಬೆಂಗಳೂರಿನಲ್ಲಿ ಇದ್ದವರು ಸಭೆಗೆ ಬಂದಿದ್ದಾರೆ. ದಿಢೀರನೆ​​ ತಿಳಿಸಿದ್ದರಿಂದ ಕೆಲವರು ಸಭೆಗೆ ಎಲ್ಲರೂ ಬರಲು ಆಗಿಲ್ಲ. ಮತ್ತೊಮ್ಮೆ ಎಲ್ಲರೂ ಸಭೆ ಸೇರಿ ಹೋರಾಟದ ಬಗ್ಗೆ ಚರ್ಚಿಸುತ್ತೇವೆ. ಒಂದಿಬ್ಬರು ಬೇರೆ ಬೇರೆ ಕಾರಣಗಳಿಂದ ಯೋಚನೆ ಮಾಡುತ್ತಿದ್ದಾರೆ. ನನ್ನ ಪ್ರಕಾರ ಯಾರೂ ಬಿಜೆಪಿ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.

ಸರ್ಕಾರ ಲೋಪ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್

ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಮಾಧ್ಯಮಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ. ಯಾರು ಸಹಿ ಹಾಕಿದ್ದಾರೋ ಶಾಸಕರು ಅವರನ್ನು ವಿಚಾರಣೆ ಮಾಡಿ. ಅದು ಬಿಟ್ಟು ಮಾಧ್ಯಮಗಳಿಗೆ ನೋಟಿಸ್ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಟ್ರಾಕ್ಟರ್‌ಗಳು ದೂರು ನೀಡಿದರೆ ಅವರನ್ನೂ ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ನೆಪದಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ನಿಮ್ಮ ವಿರುದ್ಧ ದನಿ ಎತ್ತಿದವರ ದನಿ ಅಡಗಿಸಲು ಪ್ರಯತ್ನ ಮಾಡುತ್ತಿದ್ದೀರಾ? ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಗೂಂಡಾ ರಾಜ್ಯ ಮಾಡಲು ಹೊರಟ ಕಾಂಗ್ರೆಸ್

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಆರ್. ಅಶೋಕ್, ಸರ್ಕಾರ ಈ ರಾಜ್ಯವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದೆ. ನಾವು ಯಾವುದೇ ಬಿಲ್ ತಡೆ ಹಿಡಿದಿಲ್ಲ. ಇವತ್ತು ಕಮಿಷನ್ ದಂಧೆಗಾಗಿ ಕಾಂಗ್ರೆಸ್ ನಾಯಕರು ಧಮ್ಕಿ ಹಾಕುತ್ತಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Fri, 18 August 23