ಮೈಸೂರು: ಮೈಸೂರು ಜಿಲ್ಲಾಡಳಿತ ಮಾದರಿ ಅಧಿಕಾರಿಗಳನ್ನ ಕಂಡಿದೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅಂತಹ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಈಗಿರುವ ಜಿಲ್ಲಾಡಳಿತವೂ ಅದೇ ರೀತಿ ಕೆಲಸ ಮಾಡಬೇಕು. ಕೆಲಸ ಮಾಡುವುದರಲ್ಲಿ ವೈಯಕ್ತಿಕತೆಯ ಪ್ರಶ್ನೆ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಮೈಸೂರು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಹೆಚ್ಚು ಹೊತ್ತು ಸಭೆ ನಡೆಸುವುದನ್ನ ಬಿಡಲಿ. ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ ಎಂದೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಂಸದ ಪ್ರತಾಪ್ ಸಿಂಹ ಸೂಚಿಸಿದ್ದಾರೆ.
ಮೈಸೂರು ಜಿಲ್ಲೆ ಅಭಿರಾಮ್ ಜೀ ಶಂಕರ್, ಶಿಖಾ, ರಂದೀಪ್ ರಂತಹ ಮಾದರಿ ಅಧಿಕಾರಿಗಳನ್ನು ಕಂಡಿದೆ. ಮೈಸೂರಿನಲ್ಲಿ ಮೂವರು ಐಎಎಸ್ ಕೆಡಾರ್ ಅಧಿಕಾರಿಗಳಿದ್ದಾರೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತೆ, ಜಿ.ಪಂ. ಸಿಇಓ ಇದ್ದಾರೆ. ಇವರೆಲ್ಲರೂ ಒಂದೊಂದು ಟಾಸ್ಕ್ಫೋರ್ಸ್ ವಹಿಸಿಕೊಂಡು ಕೆಲಸ ಮಾಡಿದರೆ ಸೂಕ್ತವಾದೀತು. ಆ ನಿಟ್ಟಿನಲ್ಲಿ ಈಗಿರುವ ಜಿಲ್ಲಾಡಳಿತವೂ ಕೆಲಸ ಮಾಡಬೇಕೆಂಬುದು ನಮ್ಮ ನಿರೀಕ್ಷೆ. ಜನಪ್ರತಿನಿಧಿಗಳೂ ಟಾಸ್ಕ್ಫೋರ್ಸ್ ವಹಿಸಿ ಕೆಲಸ ಮಾಡ್ತಿದ್ದೇವೆ. ಆಕ್ಸಿಜನ್, ಬೆಡ್, ಆಸ್ಪತ್ರೆ ಸೇರಿ ಎಲ್ಲವನ್ನೂ ನೋಡಿಕೊಳ್ತಿದ್ದೇವೆ. ಜಿಲ್ಲಾಧಿಕಾರಿ ಹೆಚ್ಚು ಹೊತ್ತು ಸಭೆ ನಡೆಸುವುದನ್ನ ಬಿಡಲಿ. ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾವು ಕಂಡಿದೆ. ಮೈಸೂರು ಗ್ರಾಮೀಣ ಭಾಗದಲ್ಲಿ 350 ಬೆಡ್ಗಳಿವೆ. ಮೈಸೂರು ನಗರದಲ್ಲಿ 6 ಸಾವಿರಕ್ಕೂ ಅಧಿಕ ಬೆಡ್ಗಳಿವೆ. ಹಳ್ಳಿಗಳಿಂದ ನಗರಕ್ಕೆ ಬಂದು ಸೇರುವವರು ಸಾವನ್ನಪ್ಪುತ್ತಿದ್ದಾರೆ. ಇದರಿಂದಲೇ ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾವು ಅಗುತ್ತಿರುವುದು ಗೊತ್ತಾಗುತ್ತದೆ ಎಂದು ಸಂಸದ ಪ್ರತಾಪ್ ಹೇಳಿದ್ದಾರೆ.
(mysore mp pratap simha wants district administration to act united during corona times)