ಮೈಸೂರು: ಕಲೆ ಎಂಬುದು ಯಾರೊಬ್ಬರ ಸ್ವತ್ತೂ ಅಲ್ಲ. ತಮ್ಮ ಕಲ್ಪನೆಯ ಮೊಳಕೆಗೆ ಆರೈಕೆ, ಪೋಷಣೆ ಮಾಡಿ ಅದಕ್ಕೊಂದು ರೂಪ ನೀಡುವ ಯಾರಿಗಾದರೂ ಸರಿ, ಕಲಾ ದೇವತೆ ಒಲಿಯುತ್ತಾಳೆ. ಇದಕ್ಕೆ ಸಾಕ್ಷಿ ಮೈಸೂರಿನ ಗ್ರಾಮೀಣ ಪ್ರತಿಭೆ ಚಂದನಾ. ಚಂದನಾ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬಿ.ಸರಗೂರು ಗ್ರಾಮದ ನಿವಾಸಿ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ವ್ಯರ್ಥ ವಸ್ತುಗಳನ್ನು ಬಳಸಿಕೊಂಡು, ಆಕರ್ಷಕ ಗೊಂಬೆ, ಆಟಿಕೆಗಳನ್ನು ತಯಾರಿಸುವ ಅಪರೂಪದ ಕಲೆ ಇವರಿಗೆ ಕರಗತ. ನಮ್ಮ ಸುತ್ತಮುತ್ತ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ನೂರಾರು ಗೊಂಬೆಗಳನ್ನು ತಯಾರಿಸಿದ್ದಾರೆ. ಈ ಅಪ್ಪಟ ಗ್ರಾಮೀಣ ಪ್ರತಿಭೆ ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಚೆಂದದ ಗೊಂಬೆಗಳ ತಯಾರಿಕೆ (Doll Making)
ಶಿಕ್ಷಣ ಕ್ಷೇತ್ರದಲ್ಲಿ ಕಲೆ ಸಂಶೋಧನೆಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ರಾಷ್ಟ್ರಮಟ್ಟದ ದೃಶ್ಯ ಕಲೋತ್ಸವ ಸ್ಪರ್ಧೆ ಆಯೋಜಿಸಿತ್ತು. ಬೆಂಗಳೂರಿನ ತರಬೇತಿ ಇಲಾಖೆಯಲ್ಲಿ ಜನವರಿ 15 ಮತ್ತು 16 ರಂದು ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು, 36 ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆರು ವಿಧದ ಆಟಿಕೆಗಳನ್ನು ಚಂದನಾ ತಯಾರಿಸಿದ್ದರು. ಸೋರೆಕಾಯಿ ಬಳಸಿಕೊಂಡು ಅಜ್ಜ-ಅಜ್ಜಿ, ಬ್ಯಾಲೆನ್ಸಿಂಗ್ ಡಾಲ್, ಕೋಳಿ, ಗೂಬೆ, ಜಿರಾಫೆಯನ್ನು ಮಾಡಿದ್ದರು. ಎಲ್ಲ ಗೊಂಬೆಗಳಲ್ಲೂ ಜೀವಕಳೆ ಇತ್ತು. ಚಂದನಾರ ಅದ್ಭುತ ಕಲೆಗೆ ತೀರ್ಪುಗಾರರೇ ಅಚ್ಚರಿ ವ್ಯಕ್ತಪಡಿಸಿದ್ದರು. ಆಕೆಯ ಪ್ರತಿಭೆಯನ್ನು ಗುರುತಿಸಿ, 2ನೇ ಸ್ಥಾನ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿ 20,000ರೂ. ನಗದು, ಒಂದು ಮೆಡಲ್, ಟ್ರೋಫಿಯನ್ನು ಒಳಗೊಂಡಿದೆ.
ಕಲೆ, ಉಳಿಸಿ ಬೆಳೆಸುತ್ತೇನೆ
ನಾನು ತಯಾರಿಸುವ ಬೊಂಬೆಗಳು ಹಾಗೂ ಆಟಿಕೆಗಳು ಪರಿಸರ ಸ್ನೇಹಿ ಮತ್ತು ಮರುಬಳಕೆಯ ಉತ್ಪನ್ನವಾಗಿದೆ. ಜೊತೆಗೆ ಇದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ. ಇದು ವಿಶಿಷ್ಟವಾದ ಹಾಗೂ ಸ್ಥಳೀಯ ಕಲಾ ಪ್ರಕಾರವಾಗಿದೆ. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಚಂದನಾ.
Published On - 12:20 pm, Sat, 13 February 21