ಧಾರವಾಡದ ಸಾವಿನ ರಸ್ತೆ ವಿಸ್ತರಣೆಗೆ ಅಂತೂ ಸಿಕ್ಕಿತು ಗ್ರೀನ್ ಸಿಗ್ನಲ್: ತಡವಾದರೂ ಎಚ್ಚೆತ್ತ ಸರ್ಕಾರ!
ಗುರುವಾರ ಈ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಕುರಿತಂತೆ ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿದರು.
ಧಾರವಾಡ: ಎರಡು ದಶಕಗಳಲ್ಲಿ ನೂರಾರು ಜನರ ಸಾವಿಗೆ ಕಾರಣವಾಗಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಜನವರಿ 15 ರಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ 12 ಜನ ಮೃತಪಟ್ಟಿದ್ದರು. ಈ ಘಟನೆ ಬಳಿಕ ಈ ರಸ್ತೆಯ ಅಗಲೀಕರಣಕ್ಕೆ ಸಾಕಷ್ಟು ಆಗ್ರಹ ಕೇಳಿ ಬಂದಿತ್ತು. ಆದರೆ ಇದು ಟೋಲ್ ರಸ್ತೆಯಾಗಿದ್ದು, ಒಪ್ಪಂದದ ಪ್ರಕಾರ 2024 ರ ಮೇ ತಿಂಗಳವರೆಗೆ ನಂದಿ ಹೈವೇ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ವಶದಲ್ಲಿಯೇ ಇರುತ್ತದೆ. ಆದರೆ ಈ ರಸ್ತೆಯಲ್ಲಿ ಅನೇಕ ಅಪಘಾತಗಳಾಗಿ ನೂರಾರು ಜನರು ಮೃತಪಟ್ಟರೂ ಕಂಪನಿ ಈ ಬಗ್ಗೆ ಯಾವುದೇ ಕಾಳಜಿ ವಹಿಸಿರಲಿಲ್ಲ. ಆದರೆ ಜನವರಿ 15 ರಂದು ನಡೆದ ಅಪಘಾತದ ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ನವದೆಹಲಿಯಲ್ಲಿ ಸಭೆ ಷಟ್ಪಥ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್: ಗುರುವಾರ ಈ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಕುರಿತಂತೆ ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿದರು. ಈ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿ.ಮೀ. ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾರ್ಪಡಿಸಲು ಈ ಕೂಡಲೇ ಟೆಂಡರ್ ಕರೆಯುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಗಡ್ಕರಿಯವರು ಸೂಚನೆ ನೀಡಿದರು.
ಈಗಾಗಲೇ ಇದರ ಡಿ.ಪಿ.ಆರ್. ತಯಾರಿಸಲಾಗಿದ್ದು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಆರ್.ಓ.ಬಿ. ಮತ್ತು ಆರ್.ಯು.ಬಿ. ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು. ನಿರ್ಮಾಣಕ್ಕೆ ಇನ್ನು 33 ಹೆಕ್ಟೇರ್ ಭೂ ಸ್ವಾಧೀನದ ಅವಶ್ಯಕತೆ ಇದ್ದು, ಭೂಮಿ ವಶಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಗಡ್ಕರಿ ಸೂಚಿಸಿದರು. ಈ ಸಭೆಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
ಕಳೆದ ಜುಲೈನಲ್ಲಿಯೇ ನಡೆದಿದ್ದ ಪ್ರಹ್ಲಾದ ಜೋಶಿ ನೇತ್ರತ್ವದ ಸಭೆ: ಈ ರಸ್ತೆ ವಿಸ್ತರಣೆ ವಿಷಯವಾಗಿ ಕಳೆದ ಜುಲೈ ತಿಂಗಳಿನಲ್ಲಿಯೂ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಬೈಪಾಸ್ ರಸ್ತೆಯನ್ನು 1200 ಕೋಟಿ ರೂಪಾಯಿ ವೆಚ್ಚದಲ್ಲಿ 6 ಪಥದ ರಸ್ತೆಯನ್ನಾಗಿಸಲು ಪ್ರಸ್ತಾವನೆಯನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕೇಂದ್ರ ಕಚೇರಿಗೆ ಶೀಘ್ರವಾಗಿ ಕಳುಹಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದರು. ಈ ಹಿಂದೆ ರಸ್ತೆ ನಿರ್ಮಿಸಿ, ನಿರ್ವಹಿಸುತ್ತಿರುವ ನಂದಿ ಹೈವೇ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು. ಅವರು ಕೂಡ ಈ ಯೋಜನೆಗೆ ಒಪ್ಪಿಗೆ ನೀಡಿದ್ದರು. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆಯನ್ನು ಎರಡೂ ಕಡೆ ನಿರ್ಮಿಸಲು ಕೂಡ ಸೂಚನೆ ನೀಡಲಾಗಿತ್ತು.
ಸುಪ್ರೀಂ ಕೋರ್ಟ್ಗೆ ವರದಿ ನೀಡಿದ ರಾಜ್ಯ ಸರಕಾರ! ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಈ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರಿಗೆ ಸಮಿತಿ ಪತ್ರವನ್ನು ಕಳುಹಿಸಿತ್ತು. ಈ ಪ್ರಕರಣದ ವಿಸ್ತೃತ ವರದಿ ನೀಡುವಂತೆ ನಾವು ಸೂಚಿಸುತ್ತಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅಪಘಾತ ತಡೆಯಲು ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಅಪಘಾತ ಮತ್ತು ಅದರಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆಯೂ ವರದಿ ನೀಡಲು ಸೂಚಿಸಿದ್ದು, ಈ ವರದಿ ಫೆಬ್ರವರಿ 15ರ ಒಳಗೆ ನಮ್ಮ ಕೈ ಸೇರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಸಭೆಗಳನ್ನು ನಡೆಸಿದ ಬಳಿಕ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ ಎನ್ನಲಾಗಿದೆ. ಆದರೆ ಆ ವರದಿಯಲ್ಲಿ ಸರ್ಕಾರ ಯಾವ ಯಾವ ಮಾಹಿತಿ ನೀಡಿದೆ ಎನ್ನುವುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.
ಆದರೆ ಈ ವರದಿ ತಯಾರಿಸಲು ನಡೆಸಿದ ಸಭೆಗಳ ಬಳಿಕ ಧಾರವಾಡದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಘಟನೆಗೆ ಟಿಪ್ಪರ್ ಚಾಲಕನ ನಿರ್ಲಕ್ಷತನವೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ನೀಡಿರುವ ಅನೇಕ ಅಂಶಗಳನ್ನೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿಸಲಾಗಿದೆ.
ಅಪಘಾತದ ಬಳಿಕ ಜಿಲ್ಲಾಡಳಿತ ಅನೇಕ ಸಭೆಗಳನ್ನು ನಡೆಸಿತು. ಈ ವೇಳೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸಂಬಂಧಿಸಿದವರಿಗೆ ಅನೇಕ ಸೂಚನೆಗಳನ್ನು ನೀಡಿದ್ದರು. ಆದರೆ ಅವೆಲ್ಲ ಕಾಟಾಚಾರಕ್ಕಾಗಿ ಎನ್ನುವಂತಾಗಿದೆ. ಅಪಘಾತ ನಡೆದ ಸ್ಥಳದಲ್ಲಾಗಲೀ ಅಥವಾ ರಸ್ತೆಯಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಸದ್ಯ ಈ ರಸ್ತೆಯ ನಿರ್ವಹಣೆ ಮಾಡುತ್ತಿರುವುದು ಮತ್ತು ಟೋಲ್ ವಸೂಲಿ ಮಾಡುತ್ತಿರುವುದು ನಂದಿ ಇನ್ಫ್ರಾಸ್ಟ್ರಕ್ಚರ್ ಕಂಪನಿ. ಜಿಲ್ಲಾಡಳಿತ ಕಂಪನಿ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಿಂದ ಹೆಚ್ಚಿನ ಪರಿಣಾಮವಾಗಿಲ್ಲ. ರಸ್ತೆ ಮಧ್ಯೆ ವಿಭಜಕದ ಗೆರೆ ಹಾಕಿದ್ದನ್ನು ಬಿಟ್ಟರೆ ಮತ್ತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.
ಆದರೆ ಇವೆಲ್ಲ ಅಪಸ್ವರಗಳ ಮಧ್ಯೆಯೇ ಸಚಿವ ನಿತಿನ್ ಗಡ್ಕರಿಯವರು ಈ ರಸ್ತೆಯನ್ನು ಷಟ್ಪಥ ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದ್ದು ಸ್ಥಳೀಯರಿಗೆ ಕೊಂಚ ಸಮಾಧಾನ ನೀಡಿದ್ದಂತೂ ಸತ್ಯ.
ಇದನ್ನೂ ಓದಿ: Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು