ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ: ಫೆ. 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ

2A reservation fight: ಫೆ.21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುವುದಾಗಿ ಸಿದ್ಧಗಂಗಾ ಮಠದಲ್ಲಿ ಬಸವ ಜಯಮೃತ್ಯುಂಜಯಶ್ರೀ ಹೇಳಿಕೆ ನೀಡಿದ್ದಾರೆ. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶ ಮುಗಿದ ಬಳಿಕ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಿ, ಮಾರ್ಚ್ 4ರ ವರೆಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.

  • TV9 Web Team
  • Published On - 12:01 PM, 13 Feb 2021
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ: ಫೆ. 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ
ಜಯಮೃತ್ಯುಂಜಯ ಶ್ರೀ

ತುಮಕೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟಕ್ಕೆ ಸಂಬಂಧಿಸಿದಂತೆ ಫೆಬ್ರವರಿ 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುವುದಾಗಿ ಸಿದ್ಧಗಂಗಾ ಮಠದಲ್ಲಿ ಬಸವ ಜಯಮೃತ್ಯುಂಜಯಶ್ರೀ ತಿಳಿಸಿದ್ದಾರೆ. ಇಂದು ತುಮಕೂರಿನಲ್ಲಿ ನಡೆದ ಸಭೆಯಲ್ಲಿ ವಚನಾನಂದ ಶ್ರೀ, ವಿಜಯಾನಂದ ಕಾಶಪ್ಪನವರ್, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಉಪಸ್ಥಿತಿರಿದ್ದರು. ಸಭೆಯ ಬಳಿಕ ಸುದ್ದಿಗೊಷ್ಟಿಯಲ್ಲಿ ಮಾತಾನಾಡಿದ ಜಯಮೃತ್ಯಂಜಯ ಶ್ರೀ ಅವರು ಫೆಬ್ರವರಿ 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಚಮಸಾಲಿ ಲಿಂಗಾಯತ ಮಹಾ ಸಮಾವೇಶ ನಡೆಸುವುದಾಗಿ ಹೇಳಿದರು.

 ಬೆಂಗಳೂರಿನಲ್ಲಿ ವೀರಶೈವ ಸಭೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ..
ಸಮುದಾಯದ ಸರ್ವಾನುಮತದಿಂದ ಸ್ಥಳ ಆಯ್ಕೆ ಮಾಡಲಾಗಿದೆ. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶ ಮುಗಿದ ಬಳಿಕ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಿ, ವಿಧಾನಸೌಧ ಬಳಿ ಮಾರ್ಚ್ 4ರ ವರೆಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು. ಆಗಲೂ ಸರ್ಕಾರ ಸ್ಪಂದಿಸಿಲ್ಲ ಎಂದರೇ ಮಾರ್ಚ್ 5 ರಿಂದ ಆಮರಣಾಂತ ಉಪವಾಸ ಆರಂಭ ಮಾಡುತ್ತೇವೆ ಎಂದರು. ಜೊತೆಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟದಲ್ಲಿ ಬೇರೆ ಬೇರೆ ಬೆಳವಣಿಗೆಗಳು ಆಗುತ್ತಿವೆ. ಇದ್ರಿಂದ ಸ್ವಲ್ಪ ಬೇಸರವಾಗಿದೆ. ಆದರೂ ಯಾರು ಏನೇ ಮಾಡಿದರೂ ಹೋರಾಟ ನಿಲ್ಲಲ್ಲ. ಅಲ್ಲದೆ ಬೆಂಗಳೂರಿನಲ್ಲಿ ವೀರಶೈವ ಸಭೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸಮುದಾಯದ ಮೂಗಿಗೆ ತುಪ್ಪ ಸವರುವ ಕೆಲಸ‌ ಮಾಡಬಾರದು..
ಪಾದಯಾತ್ರೆ ಬೆಂಗಳೂರು ಸಮೀಪ ಬರುತ್ತಿದ್ದಂತೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಬೇರೆ ಸಮುದಾಯದವರು ಮೀಸಲಾತಿಗೆ‌ ಒತ್ತಾಯಿಸಿದ್ರೆ ಸ್ವಾಗತಿಸುತ್ತೇವೆ. ಲಿಂಗಾಯತ ಸಮುದಾಯದ ಇತರೆ ಸ್ವಾಮೀಜಿ‌ ಹೋರಾಟವನ್ನು ಸ್ವಾಗತ ಮಾಡುತ್ತೇವೆ ಎಂದರು.‌ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಕುಲಂಕುಶವಾಗಿ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಸಿಎಂ ಪತ್ರ ಬರೆಸಿದ್ದಾರೆ. ಆದರೆ ಅದು ನೋಟಿಫೀಕೇಷನ್ ಆಗಿಲ್ಲ. ನಮ್ಮ ಸಮುದಾಯದ ಮೂಗಿಗೆ ತುಪ್ಪ ಸವರುವ ಕೆಲಸ‌ ಮಾಡಬಾರದು. ಹಿಂದುಳಿದ ವರ್ಗಕ್ಕೆ‌ ಕಳುಹಿಸುವ ಪತ್ರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷ್ ಆಗಿಲ್ಲ.‌ ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಕಚೇರಿಯಿಂದ (CMO) ಮೋಸ ಆಗಬಾರದು ಎಂದು ಜಯ್ಯಮೃತ್ಯುಂಜಯ್ಯ ಸ್ವಾಮೀಜಿ ಹೇಳಿದರು.

ಯತ್ನಾಳ್ ಅವರಿಗೆ ನೋಟಿಸ್ ನೀಡಿರುವುದಕ್ಕೆ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದು, ನಮ್ಮ ಹೋರಾಟದಲ್ಲಿ ಭಾಗವಹಿಸುವ ನಾಯಕರಿಗೆ ತೊಂದರೆ ನೀಡುವ ಕೆಲಸ‌ ನಡೆಯುತ್ತಿದೆ.‌ ನಮ್ಮ ಮುಖಂಡರಿಗೆ ನೋಟಿಸ್ ನೀಡುವುದು, ಶಕ್ತಿ ಕುಗ್ಗಿಸುವ ಕೆಲಸ‌ ಮಾಡುತ್ತಿದ್ದಾರೆ. ಯತ್ನಾಳ್‌ ಅವರಿಗೆ ನೀಡಿರುವ ನೋಟೀಸ್ ವಾಪಸ್ ತೆಗೆದುಕೊಳ್ಳಬೇಕು.‌ ಯಡಿಯೂರಪ್ಪ ಹಾಗೂ ಯತ್ನಾಳ್ ಅವರ‌ ನಡುವಿನ ಭಿನ್ನಾಭಿಪ್ರಾಯವನ್ನು ಸರಿ‌ಪಡಿಸಬೇಕು. ಈ ಬಗ್ಗೆ‌ ರಾಷ್ಟ್ರೀಯ ಬಿಜೆಪಿ ಮುಖಂಡರಿಗೆ ಮನವಿ ಮಾಡುತ್ತೇವೆ ಎಂದರು.‌

ಸಿಎಂ ಯಡಿಯೂರಪ್ಪ ನಮ್ಮ ಸಮಾಜದ ಜೊತೆ ಚೆಲ್ಲಾಟ ಆಡಬಾರದು..
ಇದೇ ವಿಷಯವಾಗಿ ಸಿದ್ದಗಂಗಾ ಮಠದಲ್ಲಿ ಮಾತಾನಾಡಿದ ವಿಜಯನಂದ ಕಾಶಪ್ಪನವರ್, ನಾನಾ ರೀತಿ ಒತ್ತಡಗಳು ಬಂದರೂ, ಅದಕ್ಕೆ ಬಗ್ಗದೇ ನಿರ್ಧಾರ ಮಾಡಲಾಗಿದೆ. ಆರಂಭದಲ್ಲಿ ನಿರ್ದರಿಸಿರುವಂತೆ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಲಾಗುತ್ತದೆ. ಬಳಿಕ ವಿಧಾನಸೌಧ ಬಳಿ ಮೀಸಲಾತಿ ನಿಡೋವರೆಗೂ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದರು.

ಸಿಎಂ ಯಡಿಯೂರಪ್ಪ ಆಯೋಗಕ್ಕೆ ಕಳಿಸಿರುವ ಪತ್ರ ಅಧಿಕೃತವಾಗಿ ತಲುಪಿಲ್ಲ ಅಂತಾ ತಿಳಿದು ನೋವಾಯ್ತು. ಸಿಎಂ ಯಡಿಯೂರಪ್ಪ ನಮ್ಮ ಸಮಾಜದ ಜೊತೆ ಚೆಲ್ಲಾಟ ಆಡಬಾರದು. ಇಂದು ಸಿಎಂ ಪುತ್ರ ವಿಜಯೇಂದ್ರ ಇತರೆ ಮಠಾಧೀಶರನ್ನ ಸೇರಿಸಿ ಸಭೆ ಮಾಡಿ ನಮ್ಮ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ.. ಇದು ಮಾಡಬಾರದು. ಸ್ವಾಮೀಜಿಗಳ ಮೂಲಕ ಪಂಚಮಸಾಲಿ ಹೋರಾಟ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಮೇಲೆ ಕಾಶಪ್ಪನವರ್ ನೇರವಾಗಿ ಆರೋಪ ಮಾಡಿದರು.