ಮೈಸೂರು, ಜ.30: ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ( Mandakalli Airport) ಬಳಿ ಭಾನುವಾರ ತಡರಾತ್ರಿ ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ 18 ತಿಂಗಳ ಗಂಡು ಹುಲಿಯೊಂದು (Tiger) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡ ನಾಲ್ಕು ಮರಿಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿದು ಬಂದಿದೆ.
ಮೃತ ಗಂಡು ಹುಲಿಯನ್ನು ಅರಣ್ಯ ಇಲಾಖೆಯು ‘ಟಿ6’ ಎಂದು ಗುರುತಿಸಿದೆ. ಮೃತ ಹುಲಿಯು ಕೆಲವು ವಾರಗಳ ಹಿಂದೆ ಸಿಂದುವಹಳ್ಳಿ-ಬ್ಯಾಟಳ್ಳಿಯಲ್ಲಿ ಕಾಣಿಸಿಕೊಂಡಿತ್ತು. ಮತ್ತು ಎರಡು ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಟೊಯೊಟಾ ಎಟಿಯೋಸ್ ವಾಹನವು ಹುಲಿಗೆ ಡಿಕ್ಕಿ ಹೊಡೆದಿದ್ದು, ಹುಲಿ ಮರಿ ತಲೆಗೆ ಗಾಯವಾಗಿದೆ ಬಳಿಕ ಸಾವನ್ನಪ್ಪಿದೆ. ಸದ್ಯ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿಯಮಾವಳಿಯಂತೆ ಹುಲಿ ಮರಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ವರದಿ ನಂತರ ಪ್ರಾಣಿಯ ದೇಹವನ್ನು ವಿಲೇವಾರಿ ಮಾಡಲಾಗುತ್ತೆ.
ಇದನ್ನೂ ಓದಿ: ಬಾವಿಗೆ ಜಿಗಿದ ತಂಗಿ ಕಾಪಾಡಲು ತಾನೂ ಬಾವಿಗೆ ಹಾರಿದ; ಅಣ್ಣ-ತಂಗಿ ಶವ ಕಂಡ ಪೋಷಕರ ಆಕ್ರಂದನ
ಈ ಮರಿಗಳ ಚಲನವಲನವನ್ನು ಡಿಸೆಂಬರ್ 18 ರವರೆಗೆ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಸೆರೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹುಲಿಯ ಕುಟುಂಬವು ಜೂನ್ 2023ರಲ್ಲಿ ಮೊದಲು ಕಾಣಿಸಿಕೊಂಡಿತ್ತು. ಭಾನುವಾರ ರಾತ್ರಿ ಕಾರಿಗೆ ಡಿಕ್ಕಿ ಹೊಡೆದು ಹುಲಿ ಮರಿ ಸಾವನ್ನಪ್ಪಿದ್ದು, ಇತ್ತೀಚೆಗೆ ಶ್ರೀರಂಗಪಟ್ಟಣ ಬಳಿ ಹುಲಿ ಮರಿ ಕಾಣಿಸಿಕೊಂಡಿತ್ತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೇಟಿಕುಪ್ಪೆ ವ್ಯಾಪ್ತಿಯಲ್ಲಿ ಟಿ8 ತಿರುಗಾಡುತ್ತಿದ್ದು, ಟಿ7 ನಗರದ ಹೊರವಲಯದಲ್ಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ ಮಾಲತಿ ಪ್ರಿಯಾ ತಿಳಿಸಿದ್ದಾರೆ. ತಾಯಿ ಹುಲಿ ಚಿಕ್ಕನಹಳ್ಳಿ ಅರಣ್ಯಕ್ಕೆ ತೆರಳಿದೆ ಎನ್ನಲಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವಿಧಾನದಂತೆ ಮೈಸೂರು ವೃತ್ತ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಬಂಡೀಪುರ ಮತ್ತು ಮೈಸೂರಿನ ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸಾವನ್ನಪ್ಪಿದ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವಿಧಿವಿಧಾನದಂತೆ ಹುಲಿಯ ಕಳೇಬರವನ್ನು ವಿಲೇವಾರಿ ಮಾಡಲಾಗಿದೆ. ಅದಕ್ಕೂ ಮುನ್ನ ಹುಲಿ ಮೃತಪಟ್ಟ ಸ್ಥಳಕ್ಕೆ ಮೈಸೂರು ವಲಯ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ, ಲಕ್ಷ್ಮಿನಾರಾಯಣ್, ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ