ಮೈಸೂರು: ನೀವೇ ತಟ್ಟೆಲೋಟ ಎಲ್ಲವನ್ನೂ ತಂದು ದಲಿತರ ಮನೆಯಲ್ಲಿ ತಿನ್ನೋದು ಬೇಕಾ? ದಲಿತರ ಮನೆಯಲ್ಲಿ ಊಟ ಮಾಡಿದರೆ ನಮಗೇನು ಲಾಭ? ರಾಜಕೀಯ ಲಾಭಕ್ಕಾಗಿ ದಲಿತರ ಮನೆಗೆ ಊಟಕ್ಕೆ ಬರಬೇಡಿ ಎಂದು ಮೈಸೂರಿನಲ್ಲಿ (Mysore) ಬಿಜೆಪಿ (BJP) ಎಂಎಲ್ಸಿ (MLC) ಹೆಚ್.ವಿಶ್ವನಾಥ್ (H Vishwanath) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತನ್ನ 3 ವರ್ಷದ ಸಾಧನೆಯನ್ನು ಜನರಿಗೆ ತಿಳಿಸಲು ಜನಸಂಕಲ್ಪ ಯಾತ್ರೆ ಪ್ರಾರಂಭ ಮಾಡಿದ್ದು, ಇದರ ಭಾಗವಾಗಿ ಅ. 12 ರಂದು ಸಿಎಂ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (BS Yadiyurappa) ಹೊಸಕೋಟೆ ಸಮೀಪದ ಕಮಲಾಪುರ ಗ್ರಾಮದ ದಲಿತ ವ್ಯಕ್ತಿಯೊಬ್ಬರ ಮನೆಯಲ್ಲಿ ಉಪಹಾರ ಸೇವಿಸಿದ್ದರು.
ಈ ಕುರಿತು ಇಂದು (ಅ. 22) ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಮೈಸೂರಿನಲ್ಲಿ ಮಾತನಾಡಿ ಹೋಟೆಲ್ ಊಟ ತಿನ್ನೋಕೆ ದಲಿತರ ಮನೆಗೆ ಹೋಗಬೇಕಾ? ನಿಮ್ಮನ್ನ ಯಾರು ಕರೆದಿರೋದು? ಇದೆಲ್ಲಾ ನಮಗೆ ಬೇಡ. ನಮಗೆ ಅವಮಾನ ಮಾಡಬೇಡಿ. ನೀವು ಮಾಡಬೇಕಾದ ಕೆಲಸ ಮಾಡಿ. ಅದು ಬಿಟ್ಟು ನೀವು ನಿಮ್ಮ ರಾಜಕೀಯ ಲಾಭಕ್ಕಾಗಿ ಬರಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.
‘ದಲಿತರ ಮನೆಗೆ ಹೋಗುತ್ತೀರಾ, ಹಾಗಾದರೆ ನೀವು ಒಂದು ಕಾರ್ಯಕ್ರಮದೊಂದಿಗೆ ಹೋಗಿ. ಅದು ಬಿಟ್ಟು ನೀವು ಬ್ರಾಂಡ್ ಹೋಟೆಲ್ ಊಟ ತಿಂಡಿ ತಿನ್ನೋಕೆ ದಲಿತರ ಮನೆ ಹೋಗಬೇಕಾ? ಬ್ರಾಹ್ಮಣರು, ಲಿಂಗಾಯತರ ಹೋಟೆಲ್ ಊಟ ತರಿಸಿ ತಿನ್ನೋಕೆ ದಲಿತರ ಮನೆಗೆ ಯಾಕ್ ಹೋಗುತ್ತೀರಾ? ದಲಿತರ ಮನೆಗೆ ನೀವು ಬಂದರೆ ನಿಮಗೆ ಲಾಭ, ನಮಗೇನು ಲಾಭ ? ದಯಮಾಡಿ ದಲಿತರ ಮನೆಗೆ ಬರಬೇಡಿ, ಬಂದು ನಮಗೆ ಅವಮಾನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಸುತ್ತೋಲೆ ವಾಪಸ್ ಪಡೆಯಿರಿ
ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರ ತಕ್ಷಣ ಈ ಸುತ್ತೋಲೆ ವಾಪಸ್ ಪಡೆಯಬೇಕು. ಸರ್ಕಾರಿ ಶಾಲೆಗಳ ನಿರ್ವಹಣೆಗೆ 100 ರೂಪಾಯಿ ಶುಲ್ಕ ಯಾಕೆ? ಸರ್ಕಾರಿ ಶಾಲೆಯಲ್ಲಿ ಓದೋರು ಆರ್ಥಿಕವಾಗಿ ಹಿಂದುಳಿದವರು. ಇವತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ ಎಂದರು.
ಕನ್ನಡ ಶಾಲೆ ಮುಚ್ಚಲು ಏನು ಹುನ್ನಾರ ಆಗಬೇಕೋ ಅದು ಆಗುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಿಂದಿನ ಸರ್ಕಾರದಿಂದಲೇ ಶಾಲಾ ನಿರ್ವಹಣೆಗೆ ವರ್ಷಕ್ಕಿಷ್ಟು ಅಂತಾ ಅನುದಾನ ನೀಡಲಾಗಿತ್ತು. ಈಗ ಅದೆಲ್ಲವನ್ನು ನಿಲ್ಲಿಸಿದ್ದಾರೆ. ಈಗ ನಿರ್ವಹಣಾ ವೆಚ್ಚ ಅಂತ ನೂರು ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ತಂದೆ ತಾಯಿ ಕೊಡುಗೆ ಅಂತಾ ತಗೆದುಕೊಂಡರೆ ಇದು ಸರಿನಾ..? ಎಂದು ಪ್ರಶನ್ನಿಸಿದರು.
ಪ್ರತಾಪ್ ಸಿಂಹ ಮೈಸೂರು ಮಹಾರಾಜರಿಗಿಂತ ದೊಡ್ಡವರು
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿದ ವಿಚಾರವಾಗಿ ಮಾತನಾಡಿದ ಅವರು ಪ್ರತಾಪ್ ಸಿಂಹ ಮೈಸೂರು ಮಹಾರಾಜರಿಗಿಂತ ದೊಡ್ಡವರು. ಅವರಿಗಿಂತ ನಾನೇ ಜಾಸ್ತಿ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ. ಅವರ ಬಗ್ಗೆ ನಾನೇನು ಮಾತನಾಡಲಿ ? ಅವರು ದೊಡ್ಡ ವ್ಯಕ್ತಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sat, 22 October 22