ಮೈಸೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವಿರೋಧವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದರು. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ವಿನಾಕಾರಣ ನನ್ನ ಹಾಗೂ ತಂದೆ ಯಡಿಯೂರಪ್ಪ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ನಮ್ಮನ್ನು ಪಂಚಸಾಲಿ ಸಮಾಜದ ವಿರೋಧಿಗಳು ಎಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಯಾರೋ ಶ್ರೀಗಳ ಮನಸ್ಸು ಕೆಡಿಸಿದ್ದಾರೆ. ಇಲ್ಲಸಲ್ಲದನ್ನು ಹೇಳಿ ಸ್ವಾಮೀಜಿಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಯಾವುದೇ ಒತ್ತಡ ಹೇರಿಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ವಿದ್ಯಾವಂತರು ಐಸಿಸ್ ಜೊತೆಗೆ ನಂಟು ಹೊಂದಿರುವುದು ಆತಂಕದ ವಿಷಯ. ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂಥದ್ದೇ ಬೆಳವಣಿಗೆಗಳು ಕಂಡು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ಸಾವರ್ಕರ್ ಫೋಟೊ ಏಕೆ ಹಾಕಬೇಕು ಎಂದು ಕಾಂಗ್ರೆಸ್ನವರು ಪ್ರಶ್ನಿಸುತ್ತಾರೆ. ಇಂಥ ಓಲೈಕೆ ಮಾತಿನಿಂದಲೇ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿ.ವೈ.ವಿಜಯೇಂದ್ರ ಆರೋಪ ಮಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇನ್ನೂ ಚುನಾವಣಾ ತಯಾರಿ ಆರಂಭಿಸಬೇಕಿದೆ. ನಾನು ಚುನಾವಣೆಗೆ ಎಲ್ಲಿಯೇ ಸ್ಪರ್ಧಿಸಿದರೂ ಹಳೇ ಮೈಸೂರು ಭಾಗವನ್ನು ಎಂದಿಗೂ ಮರೆವುದಿಲ್ಲ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ಹಳೇ ಮೈಸೂರು ಮತ್ತು ವರುಣ ಕ್ಷೇತ್ರ. ಪಕ್ಷ ಸಂಘಟನೆಗಾಗಿ ಇಲ್ಲಿನ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಬಗ್ಗೆ ಸ್ವಾಮೀಜಿ ಅಸಮಾಧಾನ
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗದಿರಲು ಯಡಿಯೂರಪ್ಪ ಕಾರಣ ಎಂದು ಜಯಮೃತ್ಯುಂಜಯ ಸ್ವಾಮೀಜಿ ಆರೋಪ ಮಾಡಿದ್ದರು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬಾರದು ಎಂದು ಯಡಿಯೂರಪ್ಪ ಒತ್ತಡ ಹಾಕುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಮೀಸಲಾತಿ ನೀಡಿದರೆ ಬೊಮ್ಮಾಯಿ ತಮಗಿಂತಲೂ ದೊಡ್ಡ ನಾಯಕರಾಗುತ್ತಾರೆ ಎಂಬ ಆತಂಕ ಯಡಿಯೂರಪ್ಪ ಅವರಿಗೆ ಇರಬಹುದು. ಯಡಿರಯೂರಪ್ಪ ಸಹಕರಿಸದೇ ಇದ್ದರೆ ಅವರು ಹೋದಲ್ಲೆಲ್ಲಾ ಕಪ್ಪು ಬಾವುಟ ಹಾರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಶಿಕಾರಿಪುರಕ್ಕೆ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಮೀಸಲಾತಿಗೆ ಆಗ್ರಹಿಸಿ 10 ಲಕ್ಷ ಜನರು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೂ ಯಡಿಯೂರಪ್ಪ ಮನಸ್ಸು ಮಾಡಲಿಲ್ಲ. ಬೊಮ್ಮಾಯಿ ನಮಗೆ ಸ್ಪಂದಿಸಬಹುದು ಎಂಬ ಆಶಯ ವ್ಯಕ್ತಪಡಿಸಿದ್ದರು.
Published On - 1:10 pm, Wed, 21 September 22