ಮೈಸೂರು, ಫೆಬ್ರವರಿ 28: ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದಿಂದ (Mysuru Airport) ಅನೇಕ ಕಡೆಗಳಿಗೆ ತೆರಳುವ ವಿಮಾನ ಸಂಚಾರವನ್ನು ಏರ್ಲೈನ್ಸ್ಗಳು ಸ್ಥಗಿತಗೊಳಿಸಿವೆ. ಇದರಿಂದ, ಆಗಾಗ್ಗೆ ವಿಮಾನಯಾನ ಮಾಡುವವರಿಗೆ, ಮುಖ್ಯವಾಗಿ ಉದ್ಯಮಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವರದಿಯಾಗಿದೆ. ಸದ್ಯ, ಮೈಸೂರಿನಿಂದ ಹೈದರಾಬಾದ್ (Hyderabad) ಮತ್ತು ಚೆನ್ನೈಗೆ (Chennai) ಮಾತ್ರ ವಿಮಾನಗಳು ಹಾರಾಟ ನಡೆಸುತ್ತಿವೆ. ಹೈದರಾಬಾದ್ – ಮೈಸೂರು – ಹೈದರಾಬಾದ್ ಮತ್ತು ಚೆನ್ನೈ – ಮೈಸೂರು – ಚೆನ್ನೈ ಮಾರ್ಗದಲ್ಲಿ ಇಂಡಿಗೋ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಹೊರತುಪಡಿಸಿ, ಇತರ ಮಾರ್ಗಗಳಲ್ಲಿನ ವಿಮಾನಗಳ ಕಾರ್ಯಾಚರಣೆಯನ್ನು ಏರ್ಲೈನ್ಸ್ಗಳು ಸ್ಥಗಿತಗೊಳಿಸಿವೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಜೆಆರ್ ಅನೂಪ್ ತಿಳಿಸಿರುವುದಾಗಿ ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ.
ವಿಮಾನವು ಹೈದರಾಬಾದ್‌ನಿಂದ ಮೈಸೂರಿಗೆ ಮಧ್ಯಾಹ್ನ 12.30 ಕ್ಕೆ ಆಗಮಿಸುತ್ತದೆ ಮತ್ತು ಮಧ್ಯಾಹ್ನ 1.15 ಕ್ಕೆ ಹೈದರಾಬಾದ್‌ಗೆ ಹೊರಡುತ್ತದೆ. ಚೆನ್ನೈ ವಿಮಾನವು ಇಲ್ಲಿ ಸಂಜೆ 6.30ಕ್ಕೆ ಬಂದಿಳಿಯುತ್ತದೆ ಮತ್ತು ರಾತ್ರಿ 7.40 ಕ್ಕೆ ಚೆನ್ನೈಗೆ ಹೊರಡುತ್ತದೆ.
ಕೊಚ್ಚಿ ಮತ್ತು ಗೋವಾಕ್ಕೆ ಈ ಹಿಂದೆಯೇ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಬೆಳಗಾವಿ, ಹುಬ್ಬಳ್ಳಿ ಮತ್ತು ಕಲಬುರಗಿಗೆ ಒಂದು ವಾರದ ಹಿಂದೆ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕೊಚ್ಚಿ, ಗೋವಾ ಮತ್ತು ಬೆಳಗಾವಿ ಮಾರ್ಗಗಳಲ್ಲಿ ಸೇವೆ ಒದಗಿಸಲು ಎಟಿಆರ್ ವಿಮಾನಗಳನ್ನು ಹೊಂದಿರುವ ನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ವಿಮಾನಗಳ ನಿರ್ವಾಹಕರಿಗೆ ಎಲ್ಲ ಸ್ಥಳಗಳಿಗೆ ಸೇವೆಗಳನ್ನು ಪುನರಾರಂಭಿಸಲು ಮನವರಿಕೆ ಮಾಡಿಕೊಡುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಮೊದಲೇ ಕಾರ್ಯಾಚರಣೆ ಮಾಡುತ್ತಿದ್ದ ಮಾರ್ಗಗಳಲ್ಲಿ ಮತ್ತೆ ಕಾರ್ಯಾರಂಭ ಮಾಡಲು ಮತ್ತು ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಿರುವ ಸಬ್ಸಿಡಿಯನ್ನು ಒದಗಿಸಬೇಕು ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ಕೊಡಗು ರೈಲು ಮಾರ್ಗ ನಿರ್ಮಿಸುತ್ತೇವೆ, ಆದರೆ: ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಇಟ್ಟ ಬೇಡಿಕೆಯೇನು?
ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಅವರು, ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ರನ್‌ವೇ ವಿಸ್ತರಣೆಗೆ ಅಗತ್ಯವಿರುವ ಮೊತ್ತವನ್ನು ಮಂಜೂರು ಮಾಡಲಾಗಿತ್ತು. ಆದರೆ, ಕಾಲುವೆಗಳ ಸ್ಥಳಾಂತರ ಸೇರಿದಂತೆ ಕೆಲವು ನಿರ್ವಹಣಾ ಕಾರ್ಯಗಳಿಗೆ ಅಂದಾಜು 150 ಕೋಟಿ ರೂ. ಬೇಕಾಗುತ್ತದೆ. ಇದನ್ನು ರಾಜ್ಯ ಸರ್ಕಾರವು ಭರಿಸಿದರೆ, ನಂತರ ಶೀಘ್ರ ಕಾಮಗಾರಿಗೆ ಚಾಲನೆ ನೀಡಬಹುದು. ಮೈಸೂರಿನವರೇ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಅನುದಾನ ನೀಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:23 am, Wed, 28 February 24