ಮೈಸೂರು, ಡಿ.17: ಕೇರಳದಲ್ಲಿ ಕೊರೊನಾ(Corona) ಆತಂಕ ಹೆಚ್ಚಿದ ಹಿನ್ನಲೆ ಮೈಸೂರು(Mysore) ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪಿ ಸಿ ಕುಮಾರಸ್ವಾಮಿ ಹೇಳಿದರು. ರಾಜ್ಯದ ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು, ಕೇರಳ ಗಡಿಭಾಗದಲ್ಲಿ ಇನ್ನು ಅಷ್ಟೊಂದು ಸಮಸ್ಯೆ ಎದುರಾಗಿಲ್ಲ. ಶೀಘ್ರದಲ್ಲಿ ಬಾವಲಿ ಚೆಕ್ ಪೋಸ್ಟ್‌ನಲ್ಲಿ ತಂಡವನ್ನು ನಿಯೋಜನೆ ಮಾಡಲಾಗುವುದು ಎಂದರು.
ಜಿಲ್ಲೆಯ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಗಿದೆ. ಅದರಲ್ಲೂ ಹೆಚ್ ಡಿ ಕೋಟೆ ಭಾಗದಲ್ಲಿ ಹೆಚ್ಚಿನ ಕ್ರಮ ವಹಿಸಲಾಗುವುದು. ಎಲ್ಲಾ ಕಡೆ ಮಾಕ್ ಡ್ರಿಲ್ ಮಾಡಿ ತಯಾರಿ ನಡೆಸಲಾಗಿದ್ದು, ಆಕ್ಸಿಜನ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ವಾತಾವರಣದ ಬದಲಾವಣೆಯಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದ್ದು, ನೆಗಡಿ ಕೆಮ್ಮು ಜ್ವರ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಜನರು ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಕೇರಳದಲ್ಲಿ ಮತ್ತೆ ಕೊರೊನಾ ಹೆಚ್ಚಳ; ರಾಜ್ಯಕ್ಕೆ ಕೋವಿಡ್ ಆತಂಕ, ಆರೋಗ್ಯ ಇಲಾಖೆಯಿಂದ ಸಭೆ
ಇನ್ನು ಆರೋಗ್ಯದ ವಿಚಾರದಲ್ಲಿ ವದಂತಿ ಸುಳ್ಳು ಮಾಹಿತಿ ಹಬ್ಬಿಸುವ ವಿಚಾರವಾಗಿ ಮಾತನಾಡಿದ ಅವರು ‘ಇದು ಅಕ್ಷಮ್ಯ ಅಪರಾಧ, ಈ ಬಗ್ಗೆ ಯಾವುದೇ ಮುಲಾಜಿಲ್ಲದೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ನಿನ್ನೆ(ಡಿ.17) ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಹೆಚ್ಚಳ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ರಾಜ್ಯ ಆರೋಗ್ಯ ಇಲಾಖೆಯಿಂದ ತುರ್ತು ಸಭೆ ಕರೆದು, ಬಳಿಕ ವಿಕಾಸಸೌಧದಲ್ಲಿ ಮಾತನಾಡಿದ ಅವರು, ‘ಕಳೆದ ಒಂದು ತಿಂಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಕೊವಿಡ್ ಲಕ್ಷಣ ಕಂಡು ಬಂದರೆ ಪರೀಕ್ಷೆ ಮಾಡುತ್ತೇವೆ ಎಂದಿದ್ದರು. ಜೊತೆಗೆ ಈಗಾಗಲೇ 3 ತಿಂಗಳಿಗೆ ಬೇಕಾಗುವಷ್ಟು ಕೊವಿಡ್ ಟೆಸ್ಟ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ