ಮೈಸೂರು: ಕೆರೆಯಲ್ಲಿ ಈಜಲು ಹೋದ 15 ವರ್ಷದ ಬಾಲಕ ಕಣ್ಮರೆ, ಸಾವನ್ನಪ್ಪಿರುವ ಶಂಕೆ

| Updated By: ಆಯೇಷಾ ಬಾನು

Updated on: Aug 07, 2023 | 8:02 AM

ನವೀನ್ ಗೌಡ ಎಂಬ 15 ವರ್ಷದ ಬಾಲಕ ಈಜಲು ಹೋಗಿದ್ದ. ಆದ್ರೆ ಈಗ ಬಾಲಕನ ಸುಳಿವೇ ಸಿಗುತ್ತಿಲ್ಲ. ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೈಸೂರು: ಕೆರೆಯಲ್ಲಿ ಈಜಲು ಹೋದ 15 ವರ್ಷದ ಬಾಲಕ ಕಣ್ಮರೆ, ಸಾವನ್ನಪ್ಪಿರುವ ಶಂಕೆ
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ
Follow us on

ಮೈಸೂರು, ಆ.07: ಕೆರೆಯಲ್ಲಿ ಈಜಲು(Swimming)  ಹೋದ 15 ವರ್ಷದ ಬಾಲಕ(Boy Missing) ಕಣ್ಮರೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹಸ್ವಾಳು ಗ್ರಾಮದ ಗರಿಕೆ ಕಟ್ಟೆ ಬಳಿಯ ಕೆರೆಗೆ ನವೀನ್ ಗೌಡ ಎಂಬ 15 ವರ್ಷದ ಬಾಲಕ ಈಜಲು ಹೋಗಿದ್ದ. ಆದ್ರೆ ಈಗ ಬಾಲಕನ ಸುಳಿವೇ ಸಿಗುತ್ತಿಲ್ಲ.

ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನವೀನ್ ಮೈಸೂರಿನ ಬೋಗಾದಿ ನಿವಾಸಿಯಾಗಿದ್ದಾನೆ. ಮಂಜೇಗೌಡ ಆಶಾ ದಂಪತಿಯ ಪುತ್ರ. ಹಸ್ವಾಳು ಗ್ರಾಮದ ಅಜ್ಜಿ ಮನೆಗೆ ಬಂದಿದ್ದ ನವೀನ್, ತನ್ನ ಸ್ನೇಹಿತನ ಜೊತೆ ಈಜಲು ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿರಬಹುದು ಎನ್ನಲಾಗುತ್ತಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅವಮಾನ ತಾಳಲಾರದೆ ರೈತ ಆತ್ಮಹತ್ಯೆ

ಇನ್ನು ಮತ್ತೊಂದೆಡೆ ಇದೇ ಜಿಲ್ಲೆಯ ಹುಣಸೂರು ತಾಲೂಕು ಕುಡಿ ಮುದ್ದನಹಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಹಿನ್ನೆಲೆ ಗಲಾಟೆ ನಡೆದದ್ದು ಅವಮಾನ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಗುರುರಾವ್ (60) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2.05 ಎಕರೆ ಜಮೀನು ಹೊಂದಿದ್ದ ಗುರುರಾವ್, 16 ಗುಂಟೆ ವಿಚಾರವಾಗಿ ಪಕ್ಕದ ಜಮೀನಿನ ಮಹೇಶ್ ಎಂಬುವವರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆ ವೇಳೆ ಮಹೇಶ್ ಕುಟುಂಬದಿಂದ ಹಲ್ಲೆ ನಡೆದ ಆರೋಪ ಕೇಳಿ ಬಂದಿದೆ. ಅವಮಾನ ತಡೆಯಲಾರದೆ ಗುರುರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಾಸಕರ ಹೆಸರು ಬರೆದಿಟ್ಟು ಎಸ್​ಡಿಎ ಆತ್ಮಹತ್ಯೆ ಪ್ರಕರಣ: ಚಿತ್ರದುರ್ಗ ಎಸ್​ಪಿ ಸ್ಪಷ್ಟನೆ

ಮನೆಯಿಂದ ಹೊರ ಹೋದ ನವ ವಿವಾಹಿತೆ ನಾಪತ್ತೆ

ಟಿ ನರಸೀಪುರ ಪಟ್ಟಣದ ವಿಶ್ವಕರ್ಮ ಬೀದಿಯಲ್ಲಿ ಶಿವಮಣಿ ಎಂಬ 19 ವರ್ಷದ ನವ ವಿವಾಹಿತೆ ಕಾಣೆಯಾಗಿದ್ದಾರೆ.ಜುಲೈ 30ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಹೊರ ಹೋದ ಶಿವಮಣಿ ಇಲ್ಲಿಯ ತನಕ ಪತ್ತೆಯಾಗಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಎಂಬುವವರ ಜೊತೆ ಶಿವಮಣಿ ವಿವಾಹವಾಗಿತ್ತು. ಇದೀಗ ಒಂದು ವಾರ ಕಳೆದರು ಶಿವಮಣಿ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ಪತ್ನಿಯನ್ನು ಹುಡುಕಿಕೊಡುವಂತೆ ಟಿ ನರಸೀಪುರ ಪೊಲೀಸ್ ಠಾಣೆಗೆ ಪತಿ ಶ್ರೀನಿವಾಸ್ ದೂರು ನೀಡಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ