Chamundi Hills Ropeway: ಚಾಮುಂಡಿ ಬೆಟ್ಟಕ್ಕೆ ರೋಪ್​ವೇ ಪ್ರಸ್ತಾವ ಕೈಬಿಟ್ಟ ಮೈಸೂರು ಜಿಲ್ಲಾಡಳಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 06, 2022 | 2:24 PM

ಮೈಸೂರಿನ ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ ಆಗಬೇಕು. ಪ್ರವಾಸಿ ಸ್ಥಳ ಆಗುವುದಕ್ಕಿಂತ ಅದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

Chamundi Hills Ropeway: ಚಾಮುಂಡಿ ಬೆಟ್ಟಕ್ಕೆ ರೋಪ್​ವೇ ಪ್ರಸ್ತಾವ ಕೈಬಿಟ್ಟ ಮೈಸೂರು ಜಿಲ್ಲಾಡಳಿತ
ಚಾಮುಂಡಿ ಬೆಟ್ಟದ ವಿಹಂಗಮ ನೋಟ (ಸಂಗ್ರಹ ಚಿತ್ರ)
Follow us on

ಮೈಸೂರು: ಚಾಮುಂಡಿ ಬೆಟ್ಟಕ್ಕೆ (Chamundi Hill) ರೋಪ್​​​ವೇ (Rope Way) ನಿರ್ಮಿಸುವ ಪ್ರಸ್ತಾವಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವನ್ನೇ ಜಿಲ್ಲಾಡಳಿತ ಕೈಬಿಟ್ಟಿದೆ. ಮೈಸೂರಿನಲ್ಲಿ ಈ ಸಂಬಂಧ ನಡೆದ ಸಭೆಯ ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್, ಮೈಸೂರಿನ ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ (Religious Plae) ಆಗಬೇಕು. ಪ್ರವಾಸಿ ಸ್ಥಳ (Tourist Spot) ಆಗುವುದಕ್ಕಿಂತ ಅದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು, ಧಾರ್ಮಿಕ ಭಾವನೆಯಿಂದ ಬರುತ್ತಾರೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಕೈ ಬಿಟ್ಟಿದ್ದೇವೆ. ಬೆಟ್ಟಕ್ಕೆ ಹೋಗಲು ರಸ್ತೆ ಮಾರ್ಗ, ಮೆಟ್ಟಿಲುಗಳೇ ಸಾಕು. ರೋಪ್​ವೇ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ರೋಪ್​ವೇ ಯೋಜನೆ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು. ಈ ಸ್ಥಳವನ್ನು ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್​ವೇ ಕೈಬಿಟ್ಟಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತವು ಪತ್ರದ ಮೂಲಕ ವಿವರಣೆ ನೀಡುತ್ತದೆ ಎಂದು ವಿವರಿಸಿದರು.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ 2022-23ನೇ ಸಾಲಿನ ಬಜೆಟ್​ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದರು. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಚಿಕ್ಕಬಳ್ಳಾಪುರದ ನಂದಿಬೆಟ್ಟ ಮತ್ತು ಮೈಸೂರಿನ ಚಾಮುಂಡಿ ಬೆಟ್ಟ ರೋಪ್​ವೇ ಕಾಮಗಾರಿಗಳೂ ಅದರಲ್ಲಿ ಸೇರಿದ್ದವು. ಪ್ರವಾಸೋದ್ಯಮಕ್ಕೆ ಈ ಯೋಜನೆಗಳು ಪೂರಕವಾಗಲಿವೆ ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ಆದರೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಸರ್ಕಾರ ಹಿಂದೆ ಸರಿದಿದೆ.

ಏಕಿಷ್ಟು ವಿರೋಧ?

ಚಾಮುಂಡಿ ಬೆಟ್ಟಕ್ಕೆ ರೋಪ್​ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿಯಾಗಬಹುದು. ಭೂ ಕುಸಿತಂಧ ಅಪಾಯ ಎದುರಾಗಬಹುದು. ಅರ್ಧಗಂಟೆಯಲ್ಲಿ ಬೆಟ್ಟ ತಲುಪುವ ಸೌಲಭ್ಯ ಇರುವಾಗ ರೋಪ್​ವೇ ಏಕೆ ಬೇಕು? ಇದರಿಂದ ಪರಿಸರದ ಸಹಜ ಸೌಂದರ್ಯಕ್ಕೂ ಧಕ್ಕೆಯೊದಗುವುದಲ್ಲದೇ ಅರಣ್ಯ ನಾಶದ ಅಪಾಯವೂ ಇದೆ ಎಂದು ಪರಿಸರವಾದಿಗಳು ವಾದಿಸಿದ್ದರು. ಚಾಮುಂಡಿ ಬೆಟ್ಟದಲ್ಲಿ ಯಾವುದೇ ಕಾಮಗಾರಿ ಬೇಕಿಲ್ಲ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಸಹ ಹೇಳಿದ್ದರು.

Published On - 2:21 pm, Wed, 6 July 22