ಮೈಸೂರು: ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಗ್ರಹಾರದ 101 ಗಣಪತಿ ದೇವಸ್ಥಾನ ತೆರವಿಗೆ ವಿರೋಧ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮೈಸೂರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನ 101 ಗಣಪತಿ ದೇವಾಲಯ ನಮ್ಮ ಪ್ರತೀಕ. ನಾವು ಯಾವುದೇ ವಾಹನ ಖರೀದಿ ಮಾಡಿದರು ಇಲ್ಲಿ ಪೂಜೆ ಮಾಡಿಸುತ್ತೇವೆ. ಇದಕ್ಕೆ ನೋಟಿಸ್ ಕೊಟ್ಟು ನೆಲಸಮ ಮಾಡುತ್ತೇವೆ ಅಂತಾ ಜಿಲ್ಲಾಡಳಿತ ಹೇಳಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಕಳ್ಳರಂತೆ ಬೆಳಗಿನ ಜಾವ ಬಂದು ದೇಗುಲ ಒಡೆಯುತ್ತಿದ್ದಾರೆ ಎಂದು ಹೇಳಿದರು.
ಮಸೀದಿ, ಚರ್ಚ್ಗಳು ಇಲ್ವಾ?
ಇದನ್ನು ಒಪ್ಪಲು ನಮಗೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ ಪ್ರತಾಪ್ ಸಿಂಹ, ಕೇವಲ ದೇವಾಲಯಗಳನ್ನು ಏಕೆ ಟಾರ್ಗೆಟ್ ಮಾಡ್ತಿದ್ದೀರಿ? ಮಸೀದಿ, ಚರ್ಚ್ಗಳು ಇಲ್ವಾ ಎಂದು ಪ್ರಶ್ನಿಸಿದ್ದಾರೆ.
2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ಕೊಟ್ಟಿಲ್ವಾ? ಜಿಲ್ಲಾಡಳಿತ
ಕ್ಯಾತಮಾರನಹಳ್ಳಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿದ್ರಾ? ಎಂದು ಪ್ರಶ್ನಿಸಿದ ಸಂಸದ ಪ್ರತಾಪ್, ಜಿಲ್ಲಾಡಳಿತಕ್ಕೆ ನಾನು ದಬಾಯಿಸಿದೆ ಅಂತಾರೆ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ಸಹಜ. ಧರ್ಮ ಪ್ರೀತಿಸುವ ಎಲ್ಲರಿಗೂ ಈ ಆಕ್ರೋಶ ಸಹಜ. ಸುಪ್ರೀಂಕೋರ್ಟ್ ಆದೇಶ ಅಂತಾ ಮೈಸೂರು ಜಿಲ್ಲಾಡಳಿತ ಜನರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು.
ನಾವು ನ್ಯಾಯಾಲಯಕ್ಕೆ ವಿರೋಧವಿಲ್ಲ. ನ್ಯಾಯಾಲಯ ಸೂಚಿಸಿದ ನಿರ್ದೇಶನಗಳನ್ನೆ ಜಿಲ್ಲಾಡಳಿತ ಪಾಲಿಸಿಲ್ಲ. ದೇವರಾಜು ಅರಸು ರಸ್ತೆಯಲ್ಲಿನ ದರ್ಗಾ ಬಗ್ಗೆ ನಾನು ಮಾತಾಡಿದ್ದೆ. ಆ ದರ್ಗಾ ಪಾದಚರಿ ರಸ್ತೆ ಮೇಲಿದೆ. ಅದರಿಂದ ಜನರಿಗೆ ತೊಂದರೆ ಆಗುತ್ತೆ. ಇದನ್ನು ತೆರವು ಮಾಡಲು ಜಿಲ್ಲಾಡಳಿತ ಸಿದ್ಧವಾಗಿಲ್ಲ. ಇದಕ್ಕೆ ನಾನು ತೊಡೆ ನಡುಗುತ್ತಾ ಎಂದು ಕೇಳಿದ್ದೆ. ಜನರಿಗೆ ತೀರಾ ತೊಂದರೆ ಆಗುತ್ತೆ ಅಂದರೆ ಸ್ಥಳಾಂತರ ಮಾಡಿ ಎಂದು ಪ್ರತಾಪ್ ಹೇಳಿದರು.
ನಮ್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವದ ಸ್ಥಾನವಿದೆ
ನಾವು ಬಳೆ ತೊಟ್ಟುಕೊಂಡಿಲ್ಲ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸದ ಸಂಸದ ಪ್ರತಾಪ್ ಸಿಂಹ. ತನ್ವೀರ್ ಸೇಠ್ ಇತರ ಅಲ್ಪಸಂಖ್ಯಾತ ನಾಯಕರ ರೀತಿ ಅಲ್ಲ ಅಂದುಕೊಂಡಿದ್ದೆ. ಅವರಿಂದ ನಾನು ಇಂಥ ಮಾತು ನಿರೀಕ್ಷಿಸಿರಲಿಲ್ಲ. ಬಳೆ ಅಂದರೆ ಅಬಲೆ ಸಂಕೇತನಾ ನಿಮಗೆ? ನೀವು ಪ್ರೀತಿಸುವ ಹೈದರಾಲಿಯ ಸೈನಿಕರನ್ನು ಹೊಡೆದಿದ್ದು ಓನಕೆ ಒಬವ್ವ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದು ಕಿತ್ತೂರು ಚೆನ್ನಮ್ಮ. ವೀರ ವನಿತೆ ಅಬ್ಬಕ್ಕನ ಸಾಹಸ ನಮಗೆ ಆದರ್ಶ. ಮಹಿಳೆಯನ್ನು ಆರಾಧಿಸುತ್ತೇವೆ. ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣೆ. ಹೆಣ್ಣನ್ನು ಬುರ್ಖಾದೊಳಗೆ ಕೂಡಿಟ್ಟು, ಭೋಗಕ್ಕೆ ಬಳಸುವುದು ನಿಮ್ಮ ಧರ್ಮದ ಸಂಸ್ಕೃತಿ ಆಗಿರಬಹುದು. ಆದರೆ ನಮ್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವದ ಸ್ಥಾನವಿದೆ. ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತವೆಂದು ಹೇಳಬೇಡಿ ಎಂದರು.
ಇದನ್ನೂ ಓದಿ
ಸನ್ನಿ ಲಿಯೋನ್ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ; ಫ್ಯಾಮಿಲಿ ಸಡಗರಕ್ಕೆ ಈ ಪೋಟೋಗಳೇ ಸಾಕ್ಷಿ
ಹಾವೇರಿಯ ರೈತನಿಗೆ ಸೇರಿದ 700ಕ್ಕೂ ಅಧಿಕ ಅಡಿಕೆ ಮರಗಳನ್ನು ಕಡಿದು ಪರಾರಿಯಾದ ದುಷ್ಕರ್ಮಿಗಳು
(opposition to Ganapathi temple clearance in Mysuru)
Published On - 12:33 pm, Sun, 12 September 21