ಮೈಸೂರು: ಇನ್ನೂ ಆಘಾತದಿಂದ ಹೊರಬರದ ಲೋಕನಾಯಕನಗರದ ಜನ, ಶಾರೀಕ್ ಮನೆಯಿದ್ದ ರಸ್ತೆ ಈಗ ಖಾಲಿಖಾಲಿ

ಶಾರೀಕ್ ಬಗ್ಗೆ ಯಾವುದೇ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಘಟನೆ ನಡೆದು 6 ದಿನ ಕಳೆದರೂ ಜನರು ಶಾಕ್​ನಿಂದ ಹೊರಗೆ ಬಂದಿಲ್ಲ.

ಮೈಸೂರು: ಇನ್ನೂ ಆಘಾತದಿಂದ ಹೊರಬರದ ಲೋಕನಾಯಕನಗರದ ಜನ, ಶಾರೀಕ್ ಮನೆಯಿದ್ದ ರಸ್ತೆ ಈಗ ಖಾಲಿಖಾಲಿ
ಶಂಕಿತ ಉಗ್ರ ಶಾರೀಕ್ (ಎಡಚಿತ್ರ) ಮತ್ತು ಮೈಸೂರಿನಲ್ಲಿ ಅವನ ಮನೆಯ ಹತ್ತಿದ ನಿವಾಸಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 24, 2022 | 3:10 PM

ಮೈಸೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಂಕಿತ ಉಗ್ರ ಶಾರೀಕ್ ನೆಲೆಸಿದ್ದ ಮೈಸೂರಿನ ಲೋಕನಾಯಕನಗರ ಬಡಾವಣೆಯಲ್ಲಿ ನೀರವ ಮೌನ ನೆಲೆಸಿದೆ. ಶಾರೀಕ್ ಇದ್ದ ಮನೆಯಿರುವ ರಸ್ತೆಯಲ್ಲಿಯೂ ಎಲ್ಲ ಮನೆಗಳು ಖಾಲಿಖಾಲಿ. ಬಹುತೇಕ ಮನೆಗಳಲ್ಲಿ ಜನರು ಹೆದರಿಕೆಯಿಂದ ಮನೆ ತೊರೆದು ಬೇರೆಡೆಗೆ ಹೋಗಿದ್ದಾರೆ. ಇರುವವರೂ ಮಾತನಾಡಲು, ಶಾರೀಕ್ ಬಗ್ಗೆ ಯಾವುದೇ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಘಟನೆ ನಡೆದು 6 ದಿನ ಕಳೆದರೂ ಜನರು ಶಾಕ್​ನಿಂದ ಹೊರಗೆ ಬಂದಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ‘ಟಿವಿ9’ ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ರಾಮಕೃಷ್ಣ, ‘ಆತ ಮನೆಗೆ ಕುಕ್ಕರ್ ತಂದಿದ್ದು ನೋಡಿದ್ದೆ. ಆದರೆ ಅವನು ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಆಗಾಗ ಶಾರಿಕ್ ವಾಸವಿದ್ದ ಕೋಣೆಯಿಂದ ವಿಚಿತ್ರ ಶಬ್ದ ಬರುತ್ತಿತ್ತು. ಡೋರ್​ಲಾಕ್​ ಹಾಕಿಕೊಂಡು ಮನೆಯಲ್ಲಿಯೇ ಇರುತ್ತಿದ್ದ. ತಾನೊಬ್ಬ ಮುಸ್ಲಿಂ ಎಂದೂ ಯಾರೊಡನೆಯೂ ಹೇಳಿಕೊಂಡಿರಲಿಲ್ಲ’ ಎಂದು ಹೇಳಿದರು. ಶಾರೀಕ್ ಇದ್ದ ಕೋಣೆಯಿಂದ ರಾತ್ರಿ ವೇಳೆ ಕುಯ್ಯುವ ಮತ್ತು ಚಚ್ಚುವ ಶಬ್ದ ಕೇಳಿ ಬರುತ್ತಿತ್ತು. ಯಾರೊಂದಿಗೂ ಯಾವ ವಿಚಾರದ ಬಗ್ಗೆ ಅವನು ಮಾತನಾಡುತ್ತಿರಲಿಲ್ಲ. ಆತ ಕುಕ್ಕರ್ ತಂದಾಗ ವ್ಯಾಪಾರ ಮಾಡಲು ತಂದಿರಬಹುದು ಎಂದುಕೊಂಡಿದ್ದೆವು ಎಂದರು.

ಐಆರ್​ಸಿ ಎಚ್ಚರಿಕೆ ಸಂದೇಶ

ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ‘ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ತನಿಖೆ; ಅಲೋಕ್ ಕುಮಾರ್

ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ (IRC) ಮಾಧ್ಯಮ ಹೇಳಿಕೆ ಕುರಿತು ಪ್ರತ್ಯೇಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಕೃತ್ಯದ ಹೊಣೆ ಹೊತ್ತು ಸಂಘಟನೆಯೊಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ’ ಎಂದರು.

Published On - 3:10 pm, Thu, 24 November 22