ಮೈಸೂರು: ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಿದ್ದಂತೆ ಹೊಸ ಹೊಸ ಆವಿಷ್ಕಾರಗಳು ಎಲ್ಲರ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ರೋಬೋ ಸಪ್ಲೈಯರ್‌ಗಳು. ಹೌದು ಬದಲಾದ ಕಾಲಘಟ್ಟದಲ್ಲಿ ಹೋಟೆಲ್‌ನಲ್ಲಿ ಗ್ರಾಹಕರಿಗೆ ಸೇವೆ ನೀಡಲು ರೋಬೋಗಳು ಕಾಲಿಟ್ಟಿವೆ. ಅಂತಹ ಮೊದಲ ರೋಬೋ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದೆ. ಆ ರೋಬೋ ಹೇಗಿದೆ? ಅದರ ವಿಶೇಷತೆ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರಿನ ಮೊದಲ ರೋಬೋ ಸುಂದರಿ
ಗ್ರಾಹಕರಿಗೆ ಸೇವೆ ನೀಡುವ ರೋಬೋ ಸುಂದರಿ’ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಾಲಿಟ್ಟಿದ್ದಾಳೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿಯ ಸಿದ್ಧಾರ್ಥ ಹೋಟೆಲ್‌ನಲ್ಲಿ ಈ ರೋಬೋ ಸುಂದರಿ ಈಗಾಗಲೇ ತನ್ನ ಕೆಲಸ ಆರಂಭಿಸಿದ್ದಾಳೆ. ದೆಹಲಿಯಿಂದ ಆಗಮಿಸಿರುವ ಈ ರೋಬೋ ಸುಂದರಿ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಎಲ್ಲಾ ಉದ್ಯಮಗಳಲ್ಲೂ ಸ್ಪರ್ಧೆ ಇದ್ದೇ ಇದೆ. ಹಾಗೆಯೇ ಹೋಟೆಲ್ ಉದ್ಯಮದಲ್ಲೂ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಸರ್ವ್ ಮಾಡುವ ರೋಬೋಟ್‌ಗಳು, ಚೆನ್ನೈ, ಹೈದರಾಬಾದ್, ಸೇರಿ ದೇಶದ ಕೆಲವೇ ನಗರಗಳಲ್ಲಿ ಕಾಣ ಸಿಗುತ್ತವೆ. ಇದೀಗ ಇದು ಮೈಸೂರಿನ ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದೆ. ಮೊದಲ ಪ್ರಯತ್ನವಾಗಿ ಮೈಸೂರಿನ ಸಿದ್ಧಾರ್ಥ ಹೋಟೆಲ್ ರೋಬೋಟ್ ಸೇವೆಯ ಮೂಲಕ ಗ್ರಾಹಕರಿಗೆ ಸೇವೆ ಆರಂಭಿಸಿದೆ. ದೆಹಲಿಯಿಂದ ತರಿಸಿರುವ ಮಹಿಳೆ ರೂಪದ ರೋಬೋಟ್ ಸೇವೆ ಇಂದಿನಿಂದ ಪ್ರಾಯೋಗಿಕವಾಗಿ ಆರಂಭವಾಗಿದೆ.
ರೋಬೋ ಸುಂದರಿ ವಿಶೇಷತೆಗಳೇನು?
ಈ ರೋಬೋ ಬ್ಯಾಟರಿ ಚಾಲಿತವಾಗಿದೆ. 4 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ, ಸುಮಾರು 8 ಗಂಟೆಗಳ ಕಾಲ ರೋಬೋ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಧ್ವನಿ ಮೂಲಕ ಆದೇಶ ನೀಡಿದರೆ ಸಾಕು ಈ ರೋಬೋ ಕೆಲಸ ಮಾಡುತ್ತದೆ. ಇದರ ಸಂಚಾರಕ್ಕಾಗಿಯೇ ಅಡುಗೆ ಕೋಣೆ ಬಳಿಯಿಂದ ಗ್ರಾಹಕರು ಕೂರುವ ಪ್ರತಿ ಟೇಬಲ್‍ವರೆಗೆ ಮ್ಯಾಗ್ನೆಟಿಕ್ ಸ್ಟ್ರೈಪ್ ಅಳವಡಿಸಲಾಗಿದೆ. ಇದಕ್ಕೆ ಮೊದಲೇ ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ. ಗರಿಷ್ಠ 10 ಕೆಜಿಯಷ್ಟು ವಸ್ತುಗಳನ್ನಿಟ್ಟರೂ ನಿರಾಯಾಸವಾಗಿ ಸೂಚಿತ ಸ್ಥಳಕ್ಕೆ ತಲುಪಿಸುತ್ತದೆ. ಸೆನ್ಸಾರ್ ಆಧಾರದಲ್ಲಿ ರೋಬೋ ಸಂಚರಿಸಿ, ಗ್ರಾಹಕರಿಗೆ ಸೇವೆ ನೀಡುತ್ತದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿ- ತಿನಿಸನ್ನು ನಿರ್ದಿಷ್ಟ ಟೇಬಲ್ ಬಳಿಗೆ ತಲುಪಿಸುವುದು ಮಾತ್ರವಲ್ಲದೆ ಮತ್ತು ಅನೇಕ ವಿಶೇಷತೆಗಳನ್ನು ಈ ರೋಬೋಟ್ ಒಳಗೊಂಡಿದೆ.
ಈ ರೋಬೋ ಬಹುತೇಕ ಕಾರ್ಮಿಕರಂತೆಯೇ ಕಾರ್ಯ ನಿರ್ವಹಿಸಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿಯನ್ನು ಸಿದ್ದಗೊಳಿಸಿ, ರೋಬೋಟ್ ಕೈಯ್ಯಲ್ಲಿ ಅಳವಡಿಸಲಾಗಿರುವ ತಟ್ಟೆಯ ಮೇಲೆ ಇಟ್ಟು, ಟೇಬಲ್ ಸಂಖ್ಯೆಯನ್ನು ತಿಳಿಸಿದರೆ ಸಾಕು, ಕಾಂತೀಯ ಪಟ್ಟಿ ಮೇಲೆ ಸಾಗಿ ನಿರ್ದಿಷ್ಟ ಟೇಬಲ್ ಬಳಿ ನಿಂತುಕೊಳ್ಳುತ್ತದೆ. ಗ್ರಾಹಕರು ಟ್ರೇ ಮೇಲಿರುವ ತಿಂಡಿ ತಿನಿಸನ್ನು ತೆಗೆದುಕೊಂಡ ನಂತರ, ರೋಬೋ ನಿಗದಿತ ಸ್ಥಳಕ್ಕೆ ವಾಪಸ್ಸಾಗುತ್ತದೆ. ಟೇಬಲ್ ಸ್ವಚ್ಛಗೊಳಿಸುವಾಗಲೂ ರೋಬೋ ನೆರವಾಗುತ್ತದೆ. ಅಲ್ಲಿದ್ದ ಪ್ಲೇಟ್, ತಟ್ಟೆ, ಲೋಟಗಳನ್ನು ರೋಬೋ ಟ್ರೇ ಮೇಲಿಟ್ಟು ಆದೇಶ ನೀಡಿದರೆ ವಾಷಿಂಗ್ ಪ್ರದೇಶದ ಬಳಿ ಹೋಗಿ ನಿಲ್ಲುತ್ತದೆ. ಅಲ್ಲಿರುವ ಕಾರ್ಮಿಕರು ಅವುಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸುತ್ತಾರೆ. ಸದ್ಯ ಸಿದ್ಧಾರ್ಥ ಹೋಟೆಲ್‍ನಲ್ಲಿರುವುದು ಧ್ವನಿ ಆದೇಶದ ಆಧಾರದಲ್ಲಿ ಕಾರ್ಯನಿರ್ವಹಿಸುವ ರೋಬೋ. ಇದರ ಜೊತೆಗೆ ರಿಮೋಟ್ ಮೂಲಕ ನಿಯಂತ್ರಿಸುವ, ಐಪ್ಯಾಡ್ ಮೂಲಕ ಆರ್ಡರ್ ಪಡೆಯುವ ರೋಬೋಗಳೂ ಇವೆ. ಅಲ್ಲದೆ ಗ್ರಾಹಕರು ಬಂದಾಕ್ಷಣ ನೀರು ನೀಡಿ, ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಹೇಳುವ ಮೂಲಕ ಆರ್ಡರ್ ಕೇಳುವಂತೆ ಧ್ವನಿ ಅಡಕಗೊಳಿಸುವ ಆಯ್ಕೆಯೂ ಇವುಗಳಲ್ಲಿ ಇರುತ್ತದೆ.
ಮತ್ತಷ್ಟು ವಿಶೇಷತೆ
ನಿರ್ದಿಷ್ಟ ಟೇಬಲ್‍ಗೆ ತಿಂಡಿ ತಿನಿಸನ್ನು ಸರ್ವ್ ಮಾಡುವುದರ ಜೊತೆಗೆ ಈ ರೋಬೋ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಹೋಟೆಲ್‍ನಲ್ಲಿರುವ ಕೊಠಡಿಗಳ ಸಂಖ್ಯೆ, ರೆಸ್ಟೋರೆಂಟ್‍ನಲ್ಲಿ ಲಭ್ಯವಿರುವ ತಿಂಡಿ ಊಟದ ಮೆನು ಸೇರಿದಂತೆ ಇನ್ನಿತರ ಸೌಲಭ್ಯಗಳು. ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ. ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಈ ರೋಬೋದಲ್ಲಿ ದಾಖಲಿಸಬಹುದು. ಟೇಬಲ್‍ನಲ್ಲಿ ಗ್ರಾಹಕರು ಕುಳಿತಾಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ಅಂದು ರೆಸ್ಟೋರೆಂಟ್‍ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ ತಿನಿಸಿನ ಹೆಸರು ಹೇಳುತ್ತದೆ. ಹೋಟೆಲ್ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ. ಇನ್ನೂ ಹಲವು ವಿಶೇಷತೆಗಳಿವೆ ಅದನೆಲ್ಲಾ ಹಂತ ಹಂತವಾಗಿ ಅಪ್ಡೇಟ್ ಮಾಡಲು ನಿರ್ಧರಿಸಲಾಗಿದೆ. ಸದ್ಯ 20 ಟೇಬಲ್‍ಗಳಿಗೆ ರೋಬೋ ಸೇವೆ ವ್ಯವಸ್ಥೆ ಕಲ್ಪಿಸಲಾಗಿದೆ.
ರೋಬೋಟ್‌ಗೆ ಸಾಂಸ್ಕೃತಿಕ ನಗರಿಯ ಟಚ್
ರೋಬೋಟ್‌ಗೆ ಸುಂದರಿ ಅಂತಾ ಹೆಸರು ಇಟ್ಟಿರುವ ಹೋಟೆಲ್ ಸಿಬ್ಬಂದಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ವೇಷ ಭೂಷಣವನ್ನು ಸುಂದರಿಗೆ ತೊಡಿಸಿದ್ದಾರೆ. ಮೈಸೂರು ರೇಷ್ಮೇ ಸೀರೆ, ಹಣೆಗೆ ಕುಂಕುಮ, ಕತ್ತಿಗೆ ಮುತ್ತಿನ ಮಣಿ ಸೇರಿ ಮೈಸೂರಿನ ಹೆಂಗಳೆಯರ ಅಲಂಕಾರದ ಮಾದರಿಯನ್ನು ಅನುಕರಿಸಲಾಗಿದೆ. ಈ ಮೂಲಕ ನಮ್ಮ ನಾಡಿನ ಪರಂಪರೆ ಸಂಸ್ಕೃತಿಯ ಸೊಗಡನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.
ವಿದೇಶಗಳಲ್ಲಿ ರೋಬೋಟ್ ಥೀಮ್ ರೆಸ್ಟೋರೆಂಟ್‍ಗಳು ಸಾಮಾನ್ಯವಾಗಿವೆ. ಆದರೆ ಭಾರತದಲ್ಲಿ ಇತ್ತೀಚೆಗೆ ಕೆಲವೊಂದು ನಗರಗಳಲ್ಲಿ ಕಾಣಸಿಗುತ್ತಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಯುವಕರು ಆರಂಭಿಸಿದ್ದ ರೆಸ್ಟೋರೆಂಟ್‍ನಲ್ಲಿ ರೋಬೋಟ್ ಪರಿಚಯಿಸಿದ್ದರು. ಇದೀಗ ಮೈಸೂರಿಗೂ ರೋಬೋ ತರಿಸಬೇಕೆಂದು ಅಂದುಕೊಂಡಿದ್ದೆ. 2.50 ಲಕ್ಷ ರೂಪಾಯಿ ನೀಡಿ ಈ ರೋಬೋ ತರಿಸಿದ್ದೇನೆ. ಹೋಟೆಲ್‍ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡುವವರಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿದವರು ಸಾಕಷ್ಟಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಕ್ಕಾಗ ಹೋಟೆಲ್‍ನಲ್ಲಿ ಅನಿವಾರ್ಯವಾಗಿ ಕೆಲಸ ಬಿಡುತ್ತಾರೆ. ಇಂತಹ ಹಲವು ಕಾರಣಗಳಿಂದ ಲೇಬರ್ ಸಮಸ್ಯೆ ಎದುರಾಗುತ್ತದೆ. ಅಲ್ಲದೆ ಆಧುನಿಕ ಪ್ರಪಂಚದಲ್ಲಿ ಯಂತ್ರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ಕಾಲಾನುಸಾರ ಅಪ್‍ಗ್ರೇಡ್ ಆಗುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ 6 ರೋಬೋಟ್‍ಗಳನ್ನು ತರಿಸುವ ಯೋಜನೆಯಿದೆ. ಸದ್ಯಕ್ಕೆ ಒಂದು ರೋಬೋ ತರಿಸಿಕೊಂಡಿದ್ದು, ಅದರ ಕಾರ್ಯ ನಿರ್ವಹಣೆ, ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದು ವರೆಯಲಾಗುವುದು ಎಂದು ಸಿದ್ಧಾರ್ಥ ಗ್ರೂಪ್ಸ್, ಛೇರ್ಮನ್ ಪಿ.ವಿ.ಗಿರಿ ತಿಳಿಸಿದ್ದಾರೆ.
ವರದಿ: ರಾಮ್, ಟಿವಿ9 ಮೈಸೂರು
ಇದನ್ನೂ ಓದಿ: ಬ್ಲೂಬೆರಿ ಹಣ್ಣುಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯಯುತ ಗುಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ