ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದ ಸಾವು, ಜೊತೆಯಲ್ಲಿದ್ದ ವ್ಯಕ್ತಿ ಪರಾರಿ

| Updated By: ಆಯೇಷಾ ಬಾನು

Updated on: Sep 01, 2022 | 8:56 PM

ಯುವತಿಯನ್ನು ಕೊಲೆ ಮಾಡಿ ವ್ಯಕ್ತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದ ಸಾವು, ಜೊತೆಯಲ್ಲಿದ್ದ ವ್ಯಕ್ತಿ ಪರಾರಿ
Follow us on

ಮೈಸೂರು: ಮೈಸೂರು ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಹಾಗೂ ಜೊತೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾರೆ. ಯುವತಿಯನ್ನು ಕೊಲೆ ಮಾಡಿ ವ್ಯಕ್ತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಬಂಧ ಮಾತನಾಡಿದ ಮೈಸೂರು ಡಿಸಿಪಿ ಪ್ರದೀಪ್ ಗುಂಟಿ, ಯುವತಿ ಸಾವನ್ನಪ್ಪಿರುವ ಬಗ್ಗೆ ಹೋಟೆಲ್ ನ ಆಡಳಿತ ಮಂಡಳಿಯವರು ಕರೆ ಮಾಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಯುವತಿಯ ಗುರುತು ಪತ್ತೆಯಾಗಿದೆ. 21 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿದ್ದೇವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣವೇನೆಂದು ತಿಳಿಯಲಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು

ಮೈಸೂರಿನ ಹುಣಸೂರು ತಾಲೂಕು ಕೋಣನ ಹೊಸಹಳ್ಳಿ ಗ್ರಾಮದಲ್ಲಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಛಾಯ ಎಂಬ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಜ್ವರ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಛಾಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಗರ್ಭಿಣಿ ಮಹಿಳೆಗೆ ಹೆಚ್ 1 ಎನ್ 1 ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಎಂಟಿಸಿ ಬಸ್ ಹರಿದು ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರಿನ ನಾಗರಬಾವಿಯ ಖಾಸಗಿ ಹೋಟೆಲ್ ಬಳಿ ದುರಂತವೊಂದು ಸಂಭವಿಸಿದೆ. ಬಿಎಂಟಿಸಿ ಬಸ್ ಹರಿದು ಹೊಸಕೆರೆಹಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಸಂತೋಷಿ(55) ಮೃತಪಟ್ಟಿದ್ದಾರೆ. ನಾಗರಬಾವಿಯ ಜಿಎಂ ಆಸ್ಪತ್ರೆಗೆ ಮಹಿಳೆ ಮೃತದೇಹ ಸ್ಥಳಾಂತರಿಸಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಡಿತ ನಶೆಯಲ್ಲಿ ಗಲಾಟೆ ಮಾಡಿದ್ದ ಜುಲಿಯೋ ವೆಂಜಿರೋ ಬಂಧನ

ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರ ಜೊತೆ ವಿದೇಶಿ ಮಹಿಳೆಯರ ಗಲಾಟೆ ಕೇಸ್ ಸಂಬಂಧ ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ವಿದೇಶಿ ಮಹಿಳೆ ಸೆರೆ ಹಿಡಿದಿದ್ದಾರೆ. ಕುಡಿತ ನಶೆಯಲ್ಲಿ ಗಲಾಟೆ ಮಾಡಿದ್ದ ಜುಲಿಯೋ ವೆಂಜಿರೋ ಬಂಧಿತರು. ಪ್ರವಾಸಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಜುಲಿಯೋ ವೆಂಜಿರೋ, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದರು. ಪರಾರಿಯಾಗಿರುವ ಮತ್ತೊಬ್ಬ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೋಳವಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಡಿಕ್ಕಿಯಾದ ಬಸ್

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೋಳವಿ ಗ್ರಾಮದ ಕೋಳವಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಬಸ್ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಪ್ರಯಾಣಿಕನ ಕೈ ಕಟ್ ಆಗಿದೆ. ಮತ್ತೊಬ್ಬ ಪ್ರಯಾಣಿಕನ ನಾಲಗೆ ಕಟ್ ಆಗಿದೆ. ಜಿಟಿಜಿಟಿ ಮಳೆಯಿಂದ ನಿಯಂತ್ರಣ ತಪ್ಪಿದ ಬಸ್ ಇಳಿಜಾರಿನಲ್ಲಿ ಗುಡ್ಡಕ್ಕೆ ಡಿಕ್ಕಿಯಾಗಿದೆ. 6 ಪ್ರಯಾಣಿಕರಿಗೆ ಗಾಯಗಳಾಗಿದ್ದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 17 ಜನ ಅಪಾಯದಿಂದ ಪಾರಾಗಿದ್ದಾರೆ. ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವಗಲ್​​ ಬಳಿ ಸಿಡಿಲು ಬಡಿದು ಓರ್ವ ಸಾವು, ಮೂವರಿಗೆ ಗಾಯ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಬಳಿ ಸಿಡಿಲು ಬಡಿದು ಓರ್ವ ಮೃತಪಟ್ಟಿದ್ದು ಮೂವರಿಗೆ ಗಾಯಗಳಾಗಿವೆ. ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ದೇವರ ದರ್ಶನಕ್ಕೆ ಬಂದಿದ್ದರು ಆಗ ಮಳೆ ಬಂದ ಕಾರಣ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಘಟನೆ ನಡೆದಿದೆ. ಶಿರಸಂಗಿ ಗ್ರಾಮದ 52 ವರ್ಷದ ಅಶೋಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಈರಯ್ಯನಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಯಿ ಪವಿತ್ರಾ, ಪುತ್ರ ಶಿವಕುಮಾರನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 6:54 pm, Thu, 1 September 22