ಮೈಸೂರು, ಸೆ.17: ತನ್ನ ಮಗನ ಶೋಕಿಗೆ ಕುಮ್ಮಕ್ಕು ನೀಡಿದ ನಂಜನಗೂಡು ಸಂಚಾರ ಠಾಣೆಯ ಮಹಿಳಾ ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ (Transfer) ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದು, ಇಂದು ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ ಪುತ್ರ ಸೈಯ್ಯದ್ ಐಮಾನ್ ನಿನ್ನೆ ಬೈಕ್ ವ್ಹೀಲಿಂಗ್ ಮಾಡಿ ವೃದ್ಧ ರೈತ ಗುರುಸ್ವಾಮಿ ಸಾವಿಗೆ ಕಾರಣನಾಗಿದ್ದನು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಯಾಸ್ಮಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ತನ್ನನ್ನು ವರ್ಗಾವಣೆ ಮಾಡಿದ ಪೊಲೀಸ್ ಇಲಾಖೆ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಯಾಸ್ಮಿನ್ ತಾಜ್, ಶಿಸ್ತಿನ ಇಲಾಖೆ ಆದೇಶವನ್ನು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ವರ್ಗಾವಣೆ ಆದೇಶದ ಪ್ರತಿಯನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿ ನನ್ನ ಪ್ರೀತಿಯ ಇಲಾಖೆಯಿಂದ ಇದನ್ನು ಪಡೆದುಕೊಂಡಿದ್ದೇನೆ. ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು: ಪಿಎಸ್ಐ ಪುತ್ರನ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧ ಬಲಿ, ಯುವಕನನ್ನು ಬಂಧಿಸಿದ ಪೊಲೀಸರು
ಮತ್ತೊಂದು ಪೋಸ್ಟ್‌ನಲ್ಲಿ ವಿಗ್ರಹ, ಸುತ್ತಿಗೆ ಅಂತಾ ಬರೆದುಕೊಂಡ ಯಾಸ್ಮಿನ್, ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಟ್ಟವರು ಹಾಗೆಯೇ ಉಳಿಯುತ್ತಾರೆ. ನೋವು ಉಂಡವರು ಜೀವನದಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಪಿಎಸ್ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿಯಾದ ಪ್ರಕರಣ ಸಂಬಂಧ ಕೆ.ಆರ್.ಆಸ್ಪತ್ರೆ ಶವಾಗಾರದ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗಲ್ಲ. ಪಿಎಸ್ಐ ಯಾಸ್ಮಿನ್ ತಾಜ್ ಅಮಾನತು ಮಾಡಬೇಕು. ಪುತ್ರನನ್ನು ಮಾತ್ರವಲ್ಲ, ಆಕೆಯನ್ನೂ ಬಂಧಿಸಬೇಕು ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ