ಬೆಂಗಳೂರು, ಸೆ.15: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ (Chaitra Kundapura) ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದರು. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರಿಗೆ ಪಿಡ್ಸ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಬಟ್ಟೆ ತೊಳೆಯಲು ಕೊಟ್ಟ ಸಾಬೂನಿನ ನೊರೆಯನ್ನು ಬಾಯಿಗೆ ಹಾಕಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಸಿಸಿಬಿ ಕಚೇರಿಯಲ್ಲಿರುವ ವಾಶ್ ರೂಮ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅದಾಗ್ಯೂ, ಮುನ್ನೆಚ್ಚರಿಕೆ ಸಲುವಾಗಿ ಚೈತ್ರಾ ಕುಂದಾಪುರ ಅವರ ಆರೋಗ್ಯವನ್ನು ಎಲ್ಲಾ ರೀತಿಯಲ್ಲಿ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರಂತೆ, ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ. ಅದರೂ ಮೂರ್ಛೆ ರೋಗಕ್ಕೆ ಸಂಬಂಧಿಸಿದ ತಪಾಸಣೆಗಳು, ಬಿಪಿ, ಹೃದಯ ಸಂಬಂಧಿ ಚೆಕಪ್, ಉಸಿರಾಟದ ಸಮಸ್ಯೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಸಿಸಿಬಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಚೈತ್ರಾ ಕುಂದಾಪುರ, ವಂಚನೆ ಪ್ರಕರಣಕ್ಕೆ ಸ್ಫೋಟಕ ತಿರುವು
ವೈದ್ಯರ ತಪಾಸಣೆ ವೇಳೆ ಪಿಡ್ಸ್ ಅಥವಾ ಮೂರ್ಛೆ ರೋಗಕ್ಕೆ ಸಂಬಂಧಿಸಿದ ಯಾವುದೇ ಕುರುಹು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ. ಸದ್ಯ ಇನ್ನೂ ಕೆಲಕಾಲ ಅಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲು ಸಿಸಿಬಿ ಪೊಲೀಸರ ನಿರ್ಧಾರ ಮಾಡಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಬಂದ ತನಿಖಾಧಿಕಾರಿ ಸಿಸಿಬಿ ಕಚೇರಿಗೆ ವಾಪಸ್ ಆಗಿದ್ದಾರೆ. ಅಲ್ಲದೇ ಈ ಹಿಂದೆ ಇದೇ ರೀತಿ ಆಗಿದ್ದ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಚೈತ್ರಾ ಕುಂದಾಪುರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯೆ ಡಾ.ಅಸೀಮಾ ಬಾನು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್ ಇದೆ. ಚೈತ್ರಾ ಕುಂದಾಪುರಗೆ ನಡೆಸಿದ ಎಲ್ಲಾ ಟೆಸ್ಟ್ನಲ್ಲೂ ನಾರ್ಮಲ್ ಇದೆ. ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದರು.
ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಬಳಿಕ ಚೈತ್ರಾ ಕುಂದಾಪುರ ಬಾಯಿ ಬಿಡುತ್ತಿಲ್ಲವಂತೆ. ವೈದ್ಯರು ಮಾತಾಡಿಸಿದ್ದಕ್ಕೆ ಸನ್ನೆ ಮೂಲಕ ಮಾತನಾಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾಳಂತೆ. ಆದರೆ, ಆಕೆಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ನಾಟಕಕ್ಕೆ ಸಿಸಿಬಿ ಪೊಲೀಸರು ಕಂಗಾಲಾಗಿದ್ದಾರೆ. ಅದಾಗ್ಯೂ, ಸಿಸಿಬಿ ಅಧಿಕಾರಿಗಳು ಕೂಡ ಚೈತ್ರಾ ಅವರನ್ನು ಮಾತನಾಡಿಸಲು ಯತ್ನಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Fri, 15 September 23