ಚಾಮರಾಜನಗರ: ದೀಪದ ಬುಡವೇ ಕತ್ತಲು ಅಂತಾರಲ್ಲ ಹಂಗಾಗಿದೆ ಹೂವು ಕಟ್ಟಿ ಮಾರುವ ಜನರ ಬದುಕು. ಚಾಮರಾಜನಗರ ನಗರಸಭೆಯಿಂದ ಕೂಗಳತೆ ದೂರದಲ್ಲಿರುವ ಚನ್ನಿಪುರಮೋಳೆ ಗ್ರಾಮದಲ್ಲಿ 300 ಕುಟುಂಬಗಳು ನಿತ್ಯ ಹೂ ಮಾಲೆ ಮಾಡಿ ಮಾರಾಟ ಮಾಡಿ ಬದುಕುತ್ತಿವೆ.
ಚನ್ನಿಪುರ ಗ್ರಾಮಕ್ಕೆ ತಮಿಳುನಾಡಿನ ಸತ್ಯಮಂಗಲ, ಕೊಯಮ್ಮತ್ತೂರಿನಿಂದ ಬೆಳಗ್ಗೆ ಹನ್ನೊಂದು ಗಂಟೆಗೆ ಹೂವು ಬರುತ್ತೆ. ಚೆಂಡು ಮಲ್ಲಿಗೆ, ಕನಕಾಂಬರ, ಕಾಕಡ, ಸುಗಂಧರಾಜ, ಸೇವಂತಿ ಹೀಗೆ ಬಗೆ ಬಗೆಯ ಹೂವುಗಳು ಬರುತ್ತವೆ. ಹೀಗೆ ಬರುವ ಹೂವನ್ನು ಮನೆಮಂದಿಯೆಲ್ಲಾ ಕಟ್ಟಿ ಮಾರಾಟ ಮಾಡಿ, ಬದುಕು ಸಾಗಿಸುತ್ತಿದ್ದಾರೆ. ಆದರೆ ಕನಿಷ್ಠ ಸೌಲಭ್ಯಗಳು ಅನ್ನುವುದೇ ಇವರಿಗೆ ಮರೀಚಿಕೆಯಾಗಿದೆ.
ಹೂಗಳ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಇರುತ್ತೆ. ಕೆಲವೊಂದು ಸಂದರ್ಭದಲ್ಲಿ ಬೆಲೆಗಳು ಗಗನಕ್ಕೇರಿದರೆ ಕೆಲವು ಸಂದರ್ಭದಲ್ಲಿ ಪಾತಾಳಕ್ಕೆ ಬಿದ್ದಿರುತ್ತದೆ. ಇಷ್ಟಾದರೂ ಗ್ರಾಮದ ಜನತೆ ಲಾಭ-ನಷ್ಟ ಲೆಕ್ಕಿಸದೆ ಹೂಗಳನ್ನು ಕೊಂಡು ಕಟ್ಟಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಬೇಕಿದೆ ಸೂಕ್ತ ಸೌಲಭ್ಯ
ಹೂ ಮಾಲೆ ಮಾಡಿ ಮಾರಾಟ ಮಾಡುವುದೇ ಇಡೀ ಗ್ರಾಮದ ಉದ್ಯೋಗವಾಗಿದೆ. ಚನ್ನಿಪುರ ಮೋಳೆ ಅಂತಾ ಸರ್ಕಾರದ ದಾಖಲಾತಿಗಳಲ್ಲಿ ಇದ್ದರೂ ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಹೂನೂರು ಎಂದೇ ಕರೀತ್ತಾರೆ. ಇಲ್ಲಿರುವವರ ಪೈಕಿ ಬಹುಪಾಲು ಜನ ಉಪ್ಪಾರ ಸಮುದಾಯಕ್ಕೆ ಸೇರಿದವರು. ಆದರೆ ಇಡೀ ತಾಲೂಕಿಗೆ ಹೂವಿನ ಪರಿಮಳ ಹಂಚಿದವರ ಬಾಳು ಬದಲಾಗುತ್ತಿಲ್ಲ.
ಚನ್ನಿಪುರ ಮೋಳೆಯಲ್ಲಿರುವ ಕುಟುಂಬದ ಪ್ರತಿಯೊಬ್ಬರು ಹೂ ಕಟ್ಟಿ ಮಾರಾಟ ಮಾಡಲು ಹೋಗುತ್ತಾರೆ. ಶಾಲಾ ಮಕ್ಕಳು, ವೃದ್ಧರು ಎನ್ನದೇ ಪ್ರತಿಯೊಬ್ಬರು ಹೂ ಕಟ್ಟುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇಂದು ಕಟ್ಟಿದ ಹೂ ಸಂಜೆ ಅಥವಾ ನಾಳೆ ಊರೂರ ಮೇಲೆ ತಿರುಗಿ ಮಾರಾಟ ಮಾಡುತ್ತಾರೆ.
ಹೂ ಮಾರುಕಟ್ಟೆ ನಿರ್ಮಿಸಿಲ್ಲ ಸರ್ಕಾರ
ಇನ್ನು ಕೆಲವರು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಹೂವು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಸರ್ಕಾರದಿಂದ ಉತ್ತಮ ಗುಣಮಟ್ಟದ ಹೂವಿನ ಮಾರುಕಟ್ಟೆ ನಿರ್ಮಾಣ ಮಾಡಿಲ್ಲ. ಕನಿಷ್ಠ.. ಮಾರಾಟವಾಗದ ಹೂವನ್ನ ಶೇಖರಣೆ ಮಾಡಲು ಶೀತಲೀಕರಣ ಘಟಕ ನಿರ್ಮಾಣಕ್ಕೂ ಮುಂದಾಗದಿರೋದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಒಟ್ನಲ್ಲಿ ಇನ್ನಾದರೂ ಈ ಶ್ರಮಜೀವಿಗಳ ಸಮಸ್ಯೆಯನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಅವರಿಗೆ ಸದ್ಯ ಅಗತ್ಯವಿರುವ ಕನಿಷ್ಠ ಸೌಲಭ್ಯ ಕಲ್ಪಿಸಿ ಅವರ ಬಾಳಿಗೆ ಬೆಳಕಾಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರು ತಲೆ ಕೆಡಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ, ಇಲ್ಲವಾದರೆ ಮತ್ತಷ್ಟು ಕಗ್ಗಂಟಾಗುವುದು ಪಕ್ಕಾ.