ಹುಬ್ಬಳ್ಳಿ: ಕಾನೂನು ಪ್ರಕಾರ ದೇಶದಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲ. ಕೆಲ ವಿಶೇಷ ಸಂದರ್ಭಗಳಲ್ಲಿ ಕೋರ್ಟ್ ಸಮ್ಮತಿ ಪಡೆಯಬಹುದು ಅಷ್ಟೇ. ಆದ್ರೆ ಪ್ರಚಲಿತ ಕೊರೊನಾ ಕಾಲದಲ್ಲಿ ವೈದ್ಯರನ್ನೇ ಕಟ್ಟಿಹಾಕುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ವೈರಸ್ ಸೋಂಕಿತ ಗರ್ಭಿಣಿಗೆ ಗರ್ಭಪಾತ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಗರ್ಭಪಾತ ಮಾಡದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿದೆ. ಮಹಿಳೆಯನ್ನು ಉಳಿಸಿಕೊಳ್ಳಲು ಗರ್ಭಪಾತ ಮಾಡುವುದು ಈಗ ವೈದ್ಯರ ನಡೆಯಾಗಿದೆ. ಜೊತೆಗೆ ಭವಿಷ್ಯದಲ್ಲಿ, ಹುಟ್ಟುವ ಮಗುವಿಗೂ ಕೊರೊನಾ ಅಪಾಯ ಎದುರಾದರೆ ಎಂಬ ಭೀತಿಯೂ ವೈದ್ಯಲೋಕವನ್ನು ಕಾಡತೊಡಗಿದೆ.
ಗರ್ಭಪಾತಕ್ಕೆ ಕಿಮ್ಸ್ ವೈದ್ಯರ ಪಣ:
ಬಾಗಲಕೋಟೆ ಮೂಲದ 5 ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಆ ಮಹಿಳೆಗೆ ಇದು ಚೊಚ್ಚಲ ಗರ್ಭ. ಮಹಿಳೆಯ ಜೀವ ರಕ್ಷಣೆಗೆ ಕಿಮ್ಸ್ ವೈದ್ಯರ ತಂಡ ಪಣತೊಟ್ಟಿದ್ದು, ಗರ್ಭಪಾತಕ್ಕೆ ಮುಂದಾಗಿದ್ದಾರೆ. ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ ಗರ್ಭಿಣಿಗೆ ದಿನದಿಂದ ದಿನಕ್ಕೆ ಸುಸ್ತು ಹೆಚ್ಚಾಗುತ್ತಿದೆ. ಹಿಮೋಗ್ಲೋಬಿನ್ ಅಂಶ ಸಹ ಕಡಿಮೆಯಾಗುತ್ತಿದೆ. ಮೂತ್ರ ತೊಂದರೆ ಹಾಗೂ ಅಲ್ಸರ್ ಸಮಸ್ಯೆಯಿಂದ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.
ಕೋರ್ಟ್ ಅನುಮತಿ ಬೇಕಾ? ವೈದ್ಯರೇ ನಿರ್ಧರಿಸ್ತಾರಾ?
ಗರ್ಭಪಾತ ಮಾಡಿ ಮಹಿಳೆಯ ಜೀವ ಉಳಿಸಿಕೊಳ್ಳಲು ಕಿಮ್ಸ್ ವೈದ್ಯರ ತಂಡವೇನೋ ನಿರ್ಧರಿಸಿದೆ. ಆದ್ರೆ ಗರ್ಭಪಾತ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈಗ ಕೋರ್ಟ್ ಅನುಮತಿಗಾಗಿ ಕಾಯಬೇಕಾ ಅಥವಾ ವೈದ್ಯರೇ ತೀರ್ಮಾನಿಸುತ್ತಾರಾ? ಎಂದು ಕಾದು ನೋಡಬೇಕಾಗಿದೆ.
ಗರ್ಭಪಾತ ಮಾಡದಿದ್ದಕ್ಕೆ ವೈದ್ಯೆ ಮೃತಪಟ್ಟಿದ್ದರು:
2012ರಲ್ಲಿ ಐರ್ಲೆಂಡ್ನಲ್ಲಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸದ ಕಾರಣ 4 ತಿಂಗಳ ಗರ್ಭಿಣಿಯಾಗಿದ್ದ ಬೆಳಗಾವಿ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಮೃತಪಟ್ಟಿದ್ದರು. ಆಗ ಸವಿತಾ ಅವರ ಸಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳಾಗಿದ್ದವು.
ತೀವ್ರ ರಸ್ತಸ್ರಾವ ಆಗುತ್ತಿದ್ದ ಕಾರಣ ಗರ್ಭಪಾತಕ್ಕೆ ಮನವಿ ಮಾಡಿದ್ದರು. ಆದ್ರೆ ಅಲ್ಲಿನ ಕ್ಯಾಥೋಲಿಕ್ ಸಂಪ್ರದಾಯದ ಪ್ರಕಾರ ಗರ್ಭಪಾತಕ್ಕೆ ಅವಕಾಶವಿರಲಿಲ್ಲ. ಮಗುವನ್ನು ಹೊರಗೆ ತೆಗೆದುಬಿಡಿ ಎಂದು ದಂತ ವೈದ್ಯೆ ಎಷ್ಟೇ ಮನವಿ ಮಾಡಿದ್ರೂ, ಭ್ರೂಣದ ಎದೆಬಡಿತ ನಿಲ್ಲುವವರೆಗೂ ನಾವು ಏನೂ ಮಾಡಲು ಆಗುವುದಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದರು.
ಕೊನೆಗೆ ಎರಡೂವರೆ ದಿನಗಳ ನಂತರ ಸತ್ತ ಮಗುವನ್ನು ಹೊರತೆಗೆದರು. ಆದ್ರೆ ರಕ್ತಸ್ರಾವದ ಯಾತನೆಯಿಂದ ಬಳಲುತ್ತಿದ್ದ ಸವಿತಾರನ್ನು ಐಸಿಯುಗೆ ಶಿಫ್ಟ್ ಮಾಡಲಾಯಿತು. ಕೊನೆಗೆ ಮಾರಣಾಂತಿಕ ಸೋಂಕು ತಗುಲಿ ಸವಿತಾ ಮೃತಪಟ್ಟರು.
ಮುಂದೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪರ-ವಿರೋಧ ಅಭಿಪ್ರಾಯಗಳು ಮೂಡಿದ್ದವು. ಕೊನೆಗೆ ಗರ್ಭಪಾತಕ್ಕೆ ಅವಕಾಶ ನೀಡಿ ಹೊಸ ಕಾನೂನು ಬಂದಿತು. ಅದೂ ಸವಿತಾ ಗರ್ಭಪಾತ ಕಾನೂನು ಎಂದೇ ಐರ್ಲೆಂಡ್ನಲ್ಲಿ ಚಾಲ್ತಿಗೆ ಬಂದಿತು.
Published On - 12:20 pm, Fri, 8 May 20