BRTS ದುಬಾರಿ ಬಸ್​ನಿಲ್ದಾಣಗಳಲ್ಲಿ ಮೂಲಸೌಕರ್ಯವೇ ಇಲ್ಲ; ಮಹಿಳಾ ಸಿಬ್ಬಂದಿಯ ಗೋಳು ಕೇಳೋರಿಲ್ಲ

ಈಗ ಸಮಸ್ಯೆ ಪರಿಹಾರಕ್ಕೆ ಸುಲಭ ಉಪಾಯವೆಂದರೆ ಇಕೋ-ಟಾಯ್ಲೆಟ್​. ಇತ್ತೀಚೆಗೆ ಹೊಸ ಬಗೆಯ ಇಕೋ ಟಾಯ್ಲೆಟ್​ಗಳು ಬಳಕೆಗೆ ಲಭ್ಯವಾಗುತ್ತಿದ್ದು, ಅದನ್ನೇ ಪ್ರತಿಯೊಂದೂ ನಿಲ್ದಾಣದಲ್ಲಿ ಅಳವಡಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.

BRTS ದುಬಾರಿ ಬಸ್​ನಿಲ್ದಾಣಗಳಲ್ಲಿ ಮೂಲಸೌಕರ್ಯವೇ ಇಲ್ಲ; ಮಹಿಳಾ ಸಿಬ್ಬಂದಿಯ ಗೋಳು ಕೇಳೋರಿಲ್ಲ
ಬಿಆರ್​ಟಿಎಸ್ ಬಸ್​ ನಿಲ್ದಾಣದ ಚಿತ್ರಣ
Edited By:

Updated on: Dec 22, 2020 | 6:39 AM

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಕಳೆದ ವರ್ಷ ಆರಂಭವಾದ ಬಸ್ ತ್ವರಿತ ಸಂಚಾರ ವ್ಯವಸ್ಥೆಯ (BRTS)ಯ ಹುಳುಕು ಈಗ ಒಂದೊಂದಾಗಿ ಹೊರಬೀಳುತ್ತಿದೆ. ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಆರಂಭಿಸಲಾದ ಈ ಯೋಜನೆಗೆ ವಿಶ್ವಬ್ಯಾಂಕ್​ನಿಂದ ಸಹಾಯಧನವೂ ಸಿಕ್ಕಿದೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ರೂಪಿಸಲಾದ ಬಸ್ ವ್ಯವಸ್ಥೆ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳೂ ಈಗ ಕಾಣಿಸುತ್ತಿವೆ.

BRTS ಯೋಜನೆಯಡಿ ಒಟ್ಟು 32 ನಿಲ್ದಾಣಗಳು ಇವೆ. ಒಂದೊಂದು ನಿಲ್ದಾಣಕ್ಕೂ ಸುಮಾರು 1.30 ಕೋಟಿ ರೂ.ವ್ಯಯಮಾಡಲಾಗಿದೆ. ಇಷ್ಟೆಲ್ಲ ದುಬಾರಿಯಾದ ಯೋಜನೆಯಿಂದ ಎಷ್ಟು ಜನರಿಗೆ ಅನುಕೂಲವಾಗಿದೆ ಎಂದು ಪ್ರಶ್ನಿಸಿದರೆ ಉತ್ತರ ಖಂಡಿತ ನಿರಾಸೆ ಹುಟ್ಟಿಸುತ್ತದೆ.

ಶೌಚಗೃಹ ಸಮಸ್ಯೆ
ಬಸ್ ನಿಲ್ದಾಣಗಳನ್ನು ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿ, ಹೊರಗಿನಿಂದ ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ. ಆದರೆ ಗುಣಮಟ್ಟದ ಬಗ್ಗೆ ಮಾತ್ರ ಆಕ್ಷೇಪಣೆ ಕೇಳಿ ಬರುತ್ತಲೇ ಇದೆ. ಎಷ್ಟೋ ಬಸ್ ನಿಲ್ದಾಣಗಳಲ್ಲಿ ಅಂದಕ್ಕಾಗಿ ನಿರ್ಮಿಸಲಾದ ಕಟ್ಟಿಗೆ ಡಿಸೈನ್​ಗಳು ಅಳವಡಿಸಿದ ಕೆಲವೇ ದಿನಗಳಲ್ಲಿ ಕಿತ್ತು ಬಿದ್ದಿದ್ದವು. ಅದರ ಹೊರತಾಗಿ ಕೂಡ ಅನೇಕ ದೂರುಗಳು ಕೇಳಿಬಂದಿವೆ.

ಅದೆಲ್ಲ ಬಿಡಿ, ಹಲವು ಬಸ್​ ನಿಲ್ದಾಣಗಳಲ್ಲಿ ಸಿಬ್ಬಂದಿಗೆ ಶೌಚಗೃಹವೇ ಇಲ್ಲ. ಇದರಿಂದಾಗಿ ಮಹಿಳಾ ಸಿಬ್ಬಂದಿಯ ಪಾಡಂತೂ ತೀರ ಕಷ್ಟವಾಗಿದೆ. ಇಲ್ಲಿ ಟಿಕೆಟ್​ ಕೊಡಲು ಮಹಿಳಾ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿದೆ. ಬೆಳಗ್ಗೆ ಕೆಲಸಕ್ಕೆ ಬಂದರೆ 8 ತಾಸು ಅವರು ಅಲ್ಲಿಯೇ ಇರುತ್ತಾರೆ. ಈ ಹೊತ್ತಲ್ಲಿ ಅವರಿಗೆ ಶೌಚಗೃಹಕ್ಕೆ ಹೋಗಬೇಕೆಂದರೆ ಪರದಾಡುವಂತಾಗಿದೆ. ಮೇಲಧಿಕಾರಿಗಳಿಗೆ ತಿಳಿಸಲೂ ಆಗದೆ, ಮುಜುಗರದಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಶೌಚಗೃಹ ಇಲ್ಲದ ಕಾರಣ ಪ್ರಯಾಣಿಕರೂ ಕಷ್ಟಪಡುತ್ತಿದ್ದಾರೆ. ಮೂಲಸೌಕರ್ಯವೇ ಇಲ್ಲದ ಮೇಲೆ, ಚಿಗರಿ ಬಸ್​, ಬಸ್​ ನಿಲ್ದಾಣ ಎಷ್ಟು ಚೆನ್ನಾಗಿದ್ದರೇನು ಪ್ರಯೋಜನ ಎನ್ನುತ್ತಿದ್ದಾರೆ ಜನರು.

ಅಧಿಕಾರಿಗಳು ಗಮನಹರಿಸಬೇಕಿತ್ತು
ಬಸ್​ ನಿಲ್ದಾಣಗಳನ್ನು ನಿರ್ಮಿಸುವಾಗಲೇ ಅಧಿಕಾರಿಗಳು ಗಮನಹರಿಸಬೇಕಿತ್ತು. ಇಂಜಿನಿಯರ್​ಗಳು ಯೋಚಿಸಬೇಕಿತ್ತು. ಆದರೆ ಇಂಥ ಸೂಕ್ಷ್ಮ ವಿಚಾರಗಳನ್ನು ಅವರು ಗಮನಿಸದ ಪರಿಣಾಮ ಇದೀಗ ಸಿಬ್ಬಂದಿ, ಪ್ರಯಾಣಿಕರ ಮೇಲಾಗುತ್ತಿದೆ.

ಇಕೋ ಟಾಯ್ಲೆಟ್​
ಈಗ ಸಮಸ್ಯೆ ಪರಿಹಾರಕ್ಕೆ ಸುಲಭ ಉಪಾಯವೆಂದರೆ ಇಕೋ-ಟಾಯ್ಲೆಟ್​. ಇತ್ತೀಚೆಗೆ ಹೊಸ ಬಗೆಯ ಇಕೋ ಟಾಯ್ಲೆಟ್​ಗಳು ಬಳಕೆಗೆ ಲಭ್ಯವಾಗುತ್ತಿದ್ದು, ಅದನ್ನೇ ಪ್ರತಿಯೊಂದೂ ನಿಲ್ದಾಣದಲ್ಲಿ ಅಳವಡಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಇಲ್ಲದೆ ಇದ್ದರೆ ಮಹಿಳಾ ಸಿಬ್ಬಂದಿಯ ಸಂಕಷ್ಟ ಹಾಗೇ ಮುಂದುವರಿಯಲಿದೆ.