ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅತಿದೊಡ್ಡ ಭೂ ಹಗರಣ? 11 ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್

|

Updated on: Dec 25, 2020 | 11:44 AM

ಒಕ್ಕಲೆಬ್ಬಿಸಿರೋ ಗುಡಿಸಲು ನಿವಾಸಿಗಳಿಗೆ ಹಂಚಿಕೆಯಾಗ್ಬೇಕಿದ್ದ ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದು ಭಾರಿ ಹಣ ಲೋಟಿ ಮಾಡಿದ್ದಾರೆ ಎಂಬ ಆರೋಪ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ. ಒಂದಲ್ಲ, ಎರಡಲ್ಲ.. ಬರೊಬ್ಬರಿ 100ಕ್ಕೂ ಹೆಚ್ಚು ಸೈಟ್​ಗಳನ್ನು ಈ ರೀತಿ ಅಕ್ರಮವಾಗಿ ಹಂಚಿಕೆ ಮಾಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರಂತೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅತಿದೊಡ್ಡ ಭೂ ಹಗರಣ? 11 ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್
ಬಿಡಿಎ ಹೆಡ್ ಆಫೀಸ್
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅತಿದೊಡ್ಡ ಭೂ ಹಗರಣವೊಂದು ಬಯಲಾಗಿದೆ. ಬಿಡಿಎ ಸೈಟ್ ಹಂಚಿಕೆ ಸಂಬಂಧ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಒಕ್ಕಲೆಬ್ಬಿಸಿರೋ ಗುಡಿಸಲು ನಿವಾಸಿಗಳಿಗೆ ಹಂಚಿಕೆಯಾಗ್ಬೇಕಿದ್ದ ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದು ಭಾರಿ ಹಣ ಲೋಟಿ ಮಾಡಿದ್ದಾರೆ ಎಂಬ ಆರೋಪ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ. ಒಂದಲ್ಲ, ಎರಡಲ್ಲ.. ಬರೊಬ್ಬರಿ 100ಕ್ಕೂ ಹೆಚ್ಚು ಸೈಟ್​ಗಳನ್ನು ಈ ರೀತಿ ಅಕ್ರಮವಾಗಿ ಹಂಚಿಕೆ ಮಾಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರಂತೆ. ಬನಶಂಕರಿ 3ನೇ ಹಂತದಲ್ಲಿರೋ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ. 89, 90, 91, 94 ರಲ್ಲಿ ಗೋಲ್​ಮಾಲ್ ನಡೆದಿದೆ.

541 ಜನ್ರಿಗೆ ಸೈಟ್ ಹಂಚಿಕೆ ಮಾಡೋದಕ್ಕೆ ಈ ಹಿಂದೆ ಸರ್ಕಾರ ಒಪ್ಪಿಗೆ ನೀಡಿತ್ತು. ಹೀಗಾಗಿ 2005ರಲ್ಲಿ 238 ಸೈಟ್​ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಉಳಿದ 180 ನಿವಾಸಿಗಳಿಗೆ 2ನೇ ಕಂತಿನಲ್ಲಿ ಸೈಟ್ ಹಂಚಿಕೆಗೆ ಮಾಡಲು ಸರ್ಕಾರ ಒಪ್ಪಿಗೆ ನೀಡಿತ್ತು. ಮೂಲ ನಿವಾಸಿಗಳನ್ನ ಗುರುತಿಸಿ ಸೈಟ್ ಹಂಚಿಕೆ ಮಾಡೋದಕ್ಕೆ ಸೂಚಿಸಿತ್ತು. ಆದ್ರೆ 180 ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರೋ ಆರೋಪ ಕೇಳಿ ಬಂದಿದೆ. ಈ ಸಂಬಂಧ 44 ಸೈಟ್​ಗಳಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ನವೀನ್ ಎಂಬುವವರು ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದಾರೆ. ಇನ್ನು ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆ ನಡೆಸುವಂತೆ ಬಿಡಿಎಗೆ ನಗರಾಭಿವೃದ್ಧಿ ಇಲಾಖೆ ನಿರ್ದೇಶನ ನೀಡಿದೆ.

ಪ್ರಕರಣ ಸಂಬಂಧ 11 ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್
ಇನ್ನು ದಾಖಲೆ ಸಮೇತ ಭ್ರಷ್ಟ ಅಧಿಕಾರಿಗಳ ಅಕ್ರಮದ ಪಿನ್ ಟು ಪಿನ್ ಡಿಟೇಲ್ಸ್ ಟಿವಿ9ಗೆ ಲಭ್ಯವಾಗಿದೆ. ಭ್ರಷ್ಟ ಅಧಿಕಾರಿಗಳು, ಮೂಲ ನಿವಾಸಿಗಳನ್ನ ಬಿಟ್ಟು ಬೇರೊಬ್ಬ ವ್ಯಕ್ತಿಯ ಅಕ್ರಮ ಪಟ್ಟಿ ತಯಾರಿಸಿ ಅನರ್ಹರನ್ನ ಅರ್ಹ ಫಲಾನುಭವಿಗಳೆಂದು ನಮೂದಿಸಿ ಸೈಟ್ ಹಂಚಿಕೆ ಮಾಡಿದ್ದಾರೆ.

ಸರ್ಕಾರ, ಬಿಡಿಎ ನಿಗದಿಪಡಿಸಿರೋ ಅಳತೆಗಿಂತ ಹೆಚ್ಚಿನ ಅಳತೆಯ ಅನುಮೋದಿತ ನಕ್ಷೆಯಿಲ್ಲದ ಸೈಟ್​ಗಳನ್ನ ಅಲಾಟ್ ಮಾಡಿದ್ದಾರೆ. ಹಾಗೂ ಫಲಾನುಭವಿ ಅಲ್ಲದೆ ಇದ್ರೂ ಒಬ್ಬರಿಗೆ 3-4 ಸೈಟ್​ಗಳು ಹಂಚಿಕೆ ಮಾಡಿದ್ದಾರೆ. ಹೀಗೆ ಒಟ್ಟು 7 ಸೈಟ್​ಗಳನ್ನು ಅನರ್ಹರಿಗೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಹಂಚಿಕೆ ಮಾಡಿದ್ದಾರೆ. ಕಾರ್ನರ್ ಸೈಟ್​ಗಳನ್ನು ಅಲಾಟ್ ಮಾಡಿ ಬಿಡಿಎಗೆ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ದ್ವಿತೀಯ ದರ್ಜೆ ಸಹಾಯಕ ವೆಂಕಟರಮಣಪ್ಪ, ಮೇಲ್ವಿಚಾರಕ ಕೆಎಂ ರವಿಶಂಕರ್, ಮುನಿಬಚ್ಚೇಗೌಡ. ಉಪಕಾರ್ಯದರ್ಶಿ 1 ಡಾ. ಬಿ.ಸುಧಾ, ವಿ.ಮಹದೇವಮ್ಮ. ಬಿಡಿಎ ಉಪಕಾರ್ಯದರ್ಶಿ 1 ಚಿದಾನಂದ್. ಉಪಕಾರ್ಯದರ್ಶಿ 3 ಅನಿಲ್​ಕುಮಾರ್. ಉಪಕಾರ್ಯದರ್ಶಿ 3 ಭಾಸ್ಕರ್​ಗೆ ವಿಷಯ ನಿರ್ವಾಹಕ ಸಂಜಯ್ ಕುಮಾರ್, ಅಶ್ವತ್ಥನಾರಾಯಣಗೆ ಬಿಡಿಎ ನೋಟಿಸ್ ಜಾರಿಗೊಳಿಸಿದೆ.

ಬಿಡಿಎನಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದು ಮಾಡ್ತಿದೆ: BDA ನೂತನ ಅಧ್ಯಕ್ಷ S R ವಿಶ್ವನಾಥ್