ರಾಯಚೂರು: ಬೆಳಗ್ಗೆ ತಿಂಡಿ ಆಗ್ಲಿ. ರಾತ್ರಿಗೆ ಊಟ ಇರ್ಲಿ. ಅಷ್ಟೇ ಯಾಕೆ ಸಂಜೆಗೆ ಬಿಸಿ ಬಿಸಿ ಸ್ನ್ಯಾಕ್ಸ್ ಬೇಕಂದ್ರೂ ಈರುಳ್ಳಿ ಇದ್ರೇನೇ ಮಜಾ. ಎಣ್ಣೆಗಾಕಿ ಫ್ರೈ ಮಾಡ್ತಿದ್ರೆ ಅದ್ರ ಸ್ಮೆಲ್ಗೇ ಹೊಟ್ಟೆ ಚುರುಕ್ ಅನ್ಬೇಕು. ಅದ್ರಲ್ಲೂ ನಾನ್ವೆಜ್ ಐಟಮ್ಸ್ ಅಂದ್ರೂ ಈರುಳ್ಳಿಗೇ ಫಸ್ಟ್ ಪ್ರಿಫರೆನ್ಸ್. ಬಟ್ ಈಗ ಅದೇ ಈರುಳ್ಳಿ ಬೆಲೆ ಯದ್ವಾತದ್ವಾ ಹೆಚ್ಚಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿಗೆ ₹ 135 ಕೋಟಿ ನಷ್ಟ:
ಈರುಳ್ಳಿ ಬೆಲೆ ಹೆಚ್ಚಾಗಿದೆ. ಆದ್ರೆ ಈರುಳ್ಳಿ ಸಂಗ್ರಹದ ಎಡವಟ್ಟಿನಿಂದ ಪ್ರತೀ ವರ್ಷವೂ ಕೋಟಿ ಕೋಟಿ ಲಾಸ್ ಆಗ್ತಿದೆ. ಯಾಕಂದ್ರೆ ಈರುಳ್ಳಿಯನ್ನ ನಿಗದಿತ ಸಮಯದೊಳಗೆ ಖರೀದಿ ಮಾಡ್ಬೇಕು. ಹೀಗಾಗಿ ಕೃಷಿ ಮಾರುಕಟ್ಟೆ ಮಂಡಳಿ ರೈತರು ಬೆಳೆದ ಈರುಳ್ಳಿಯನ್ನ ಬೆಂಬಲ ಬೆಲೆಗೆ ಖರೀದಿಸುವ ಯೋಜನೆ ರೂಪಿಸಿದೆ. ಆದ್ರೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದಾಗಿ ಈರುಳ್ಳಿ ಸಂಗ್ರಹದಲ್ಲಿ ಪ್ರತಿ ವರ್ಷವೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಲೇ ಇದೆ.
ಕಳೆದ 2017-18ನೇ ಸಾಲಿನ ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯಾದ್ಯಂತ 138 ಕೋಟಿ ಮೌಲ್ಯದ ಈರುಳ್ಳಿ ಸಂಗ್ರಹಿಸಲಾಗಿತ್ತು. ಆದ್ರೆ ಸೂಕ್ತ ಸಂಗ್ರಹಣೆ ವ್ಯವಸ್ಥೆ ಮಾಡದಿದ್ದ ಕಾರಣ ರಾಜ್ಯಾದ್ಯಂತ 135 ಕೋಟಿ 90 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ನಷ್ಟವಾಗಿರೋದು ದಾಖಲೆಯಿಂದ ಬಯಲಾಗಿದೆ.
ಇನ್ನು ಈರುಳ್ಳಿ ಬೆಲೆ ಕಡಿಮೆ ಇದ್ದಾಗ್ಲೂ ಸಂಪೂರ್ಣ ಈರುಳ್ಳಿ ವಿಲೇವಾರಿ ಮಾಡದೇ ಇರೋದಕ್ಕೆ ಲೆಕ್ಕ ನಿಯಂತ್ರಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಎಜಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ತನಿಖೆಗೆ ಶಿಫಾರಸ್ಸು ಮಾಡಿತ್ತು. ಆದ್ರೆ ಇಂದಿಗೂ ಸರ್ಕಾರ ಈ ಬಗ್ಗೆ ತನಿಖೆಗೆ ಮುಂದಾಗದೇ ಇರೋದು ರೈತರಲ್ಲಿ ಆಕ್ರೋಶ ಮೂಡಿಸಿದೆ.
ಸದ್ಯ ರಾಜ್ಯದೆಲ್ಲಡೆ ಈರುಳ್ಳಿ ಬೆಲೆ ಗಗನಕ್ಕೇರಿದೆ. 100 ಗಡಿ ದಾಟಿ ಮುನ್ನುಗ್ತಿದೆ. ಆದ್ರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹರಿದು ಬರುತ್ತಿರುವ ಈರುಳ್ಳಿಯನ್ನ ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲಾಗ್ತಿದೆ. ಇನ್ನೊಂದ್ಕಡೆ ಕೆಲ ಬ್ರೋಕರ್ಗಳು ಈರುಳ್ಳಿ ಖರೀದಿಗೆ ಮುಂದಾಗದೇ ಕೃತಕ ಅಭಾವ ಸೃಷ್ಟಿಸ್ತಿದ್ದಾರೆ. ಜತೆಗೆ ಈರುಳ್ಳಿ ದರ ಹೆಚ್ಚಿರೋದ್ರಿಂದ ರೈತರಿಂದ ಈರುಳ್ಳಿ ಖರೀದಿಗೆ ಹಿಂದೇಟು ಹಾಕಲಾಗ್ತಿದೆ.
Published On - 12:52 pm, Tue, 3 December 19