ಕೊಪ್ಪಳ: ಸರ್ಕಾರ ನೇಕಾರರ ಬಾಳು ಬೆಳಕಾಗಲಿ ಅನ್ನೋ ಉದ್ದೇಶಕ್ಕೆ ನೇಕಾರರ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಗೆ ಕೆಲಸ ಕೊಡೋ ಅಭಿವೃದ್ಧಿ ನಿಗಮಕ್ಕೆ ಗ್ರಹಣ ಹಿಡಿದಿದೆ. ನಿಗಮದ ಎಡವಟ್ಟಿಗೆ ನೂರಾರು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿವೆ.
3 ವರ್ಷಕ್ಕೆ 300ಕ್ಕೂ ಹೆಚ್ಚು ಕೈಮಗ್ಗಗಳು ಬಂದ್:
ಕೊಪ್ಪಳದ ಭಾಗ್ಯನಗರದಲ್ಲಿರೋರಿಗೆಲ್ಲಾ ಕೈಮಗ್ಗಗಳೇ ಜೀವನಾಧಾರ. ಆದ್ರೆ ಕಳೆದ 3 ವರ್ಷಗಳಿಂದ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಅಭಿವೃದ್ಧಿ ನಿಗಮದಿಂದ ನೇಯಲು ನೂಲಿಲ್ಲದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಹೀಗಾಗಿ ಕೆಲ್ಸ ಇಲ್ಲದೆ ಕೈಮಗ್ಗಗಳು ಧೂಳು ಹಿಡೀತಿವೆ. ಸುಮಾರು 300ಕ್ಕೂ ಹೆಚ್ಚು ಕೈಮಗ್ಗಗಳು ಬಂದ್ ಆಗಿದ್ರೆ, ಇನ್ನುಳಿದ ಮುನ್ನೂರು ಕೈಮಗ್ಗಗಳಲ್ಲಿ ಕೆಲ್ಸ ಶುರುವಾಗಿದ್ದು, ನೂರಾರು ಷರತ್ತು ವಿಧಿಸಲಾಗಿದೆ. ಇದ್ರಿಂದ ನೇಕಾರಿಕೆ ನಂಬಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ.
ಇನ್ನು ಇಡೀ ಕೊಪ್ಪಳ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಚಾಲ್ತಿಯಲ್ಲಿದ್ವು. ಈಗ ಬರೀ 600 ಮಗ್ಗಗಳು ಕೆಲಸ ಮಾಡ್ತಿವೆ. ಇದ್ಕೆ ಷರತ್ತು ವಿಧಿಸಿದ್ದು, ಕೇವಲ ವಿದ್ಯಾವಿಕಾಸ ಯೋಜನೆ ಅಡಿ ಬರೋ ಮಕ್ಕಳ ಬಟ್ಟೆ ನೇಯಬೇಕಾಗಿದೆ. ಉಳಿದ ಯಾವ ನೂಲು ಕೂಡಾ ನೇಕಾರರಿಗೆ ಸಿಗ್ತಿಲ್ಲ. ಹೀಗಾಗಿ 3 ವರ್ಷಗಳಿಂದ ಒಂದೊಂದೇ ಕೈಮಗ್ಗ ಅಸ್ತಿತ್ವ ಕಳೆದುಕೊಳ್ತಿವೆ.
ಇದ್ರ ಜೊತೆಗೆ ಕೈಮಗ್ಗ, ಪವರ್ ಲೂಮ್ ಮಶೀನ್ನೊಂದಿಗೆ ಪೈಪೋಟಿ ನಡೀತಿದೆ. ಎಲ್ಲರೂ ಪವರ್ ಲೂಮ್ ಮಶೀನ್ಗೆ ಮಣೆ ಹಾಕ್ತಿದ್ದಾರೆ. ಇದ್ರಿಂದ ಕೆಲ್ಸ ಇಲ್ಲದೆ ಕೈಮಗ್ಗಗಳು ಧೂಳು ಹಿಡೀತಿವೆ. ಅಧಿಕಾರಿಗಳೇ ನೂಲು ಬರ್ತಿಲ್ಲ ಅಂತಾ ಒಪ್ಪಿಕೊಳ್ತಿದ್ದಾರೆ. ಬೀದಿಗೆ ಬಿದ್ದಿರೋ ನೇಕಾರರ ಬದುಕು ರೂಪಿಸುವ ಬದಲು ಅಭಿವೃದ್ದಿ ನಿಗಮ ಸ್ಥಾಪಿಸಿದ್ದು, ಕೆಲ್ಸ ಕಿತ್ತುಕೊಂಡಿರೋದು ಮಾತ್ರ ವಿಪರ್ಯಾಸ.
Published On - 12:16 pm, Tue, 3 December 19