ಪರಪ್ಪನ ಅಗ್ರಹಾರದ ಬ್ಯಾರಕ್​ಗಳ ಮೇಲೆ ರೇಡ್​: ದಾಳಿಗೂ ಮುನ್ನವೇ ಮಾಹಿತಿ ಲೀಕ್​?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಆರೋಪದ ಬೆನ್ನಲ್ಲೇ ಬ್ಯಾರಕ್​ಗಳ ಮೇಲೆ ದಾಳಿ ನಡೆಸಲಾಗಿದೆ. ಉಮೇಶ್ ರೆಡ್ಡಿ, ಲಷ್ಕರ್ ಉಗ್ರ ಮೊಬೈಲ್ ಬಳಸುವ ವಿಡಿಯೋ ವೈರಲ್ ಆದ ನಂತರ ಜೈಲಾಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದು, ರೇಡ್​​ಗೂ ಮೊದಲೇ ಮಾಹಿತಿ ಲೀಕ್​ ಆಗಿತ್ತಾ ಎಂಬ ಅನುಮಾನವೂ ಹುಟ್ಟುಕೊಂಡಿದೆ.

ಪರಪ್ಪನ ಅಗ್ರಹಾರದ ಬ್ಯಾರಕ್​ಗಳ ಮೇಲೆ ರೇಡ್​: ದಾಳಿಗೂ ಮುನ್ನವೇ ಮಾಹಿತಿ ಲೀಕ್​?
ಪರಪ್ಪನ ಅಗ್ರಹಾರ

Updated on: Nov 09, 2025 | 9:16 AM

ಬೆಂಗಳೂರು, ನವೆಂಬರ್​ 09: ಜೈಲಲ್ಲಿ ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಾ ಮತ್ತು ಟಿವಿ ನೋಡುತ್ತಿರುವ, ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್​ ಬೆನ್ನಲ್ಲೇ ಅಲರ್ಟ್​ ಆಗಿರುವ ಜೈಲಾಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ಗಳ ಮೇಲೆ ರೇಡ್​ ಮಾಡಿದ್ದಾರೆ. ಒಟ್ಟು 100 ಸಿಬ್ಬಂದಿ ಬ್ಯಾರಕ್​ಗಳ ಪರಿಶೀಲನೆ ಮಾಡಿದ್ದು,ತಲಾಶ್​ ವೇಳೆ ಯಾವುದೇ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ.

ಲೀಕ್​ ಆಗಿತ್ತಾ ರೇಡ್​ ಮಾಹಿತಿ?

ಬ್ಯಾರಕ್​ಗಳಲ್ಲಿ ಸಿಬ್ಬಂದಿ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನಲೆ ರೇಡ್​ ಮಾಹಿತಿ ಲೀಕ್​ ಆಗಿರುವ ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ ವಿಡಿಯ ವೈರಲ್​ ವಿಚಾರವನ್ನ ಗಂಭೀರವಾಗಿ ಪರಿಗಣಿಸಲಾಗಿದ್ದು, ಹೊರ ಬಂದಿರುವ ವಿಡಿಯೋಗಳು 2023ರಲ್ಲಿ ಚಿತ್ರೀಕರಣ ಮಾಡಿದ್ದು ಎನ್ನಲಾಗಿದೆ. ಜೈಲಿನ ಕೆಲ ಸಿಬ್ಬಂದಿಯಿಂದಲೇ ಪಿತೂರಿ ನಡೆದಿರೋ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಡಿಐಜಿ ಆನಂದ್ ರೆಡ್ಡಿ ಮತ್ತು ಜೈಲಾಧಿಕಾರಿಗಳಿಂದ ಎಡಿಜಿಪಿ ದಯಾನಂದ್ ಅವರಿಗೆ ಮಾಹಿತಿ ನೀಡಲಾಗಿದೆ. ಮೊಬೈಲ್ ಬಳಕೆ ಹಾಗೂ ವಿಡಿಯೋ ವೈರಲ್ ಕುರಿತಾಗಿ ಆಂತರಿಕ ತನಿಖೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೂ ಸಿಗುತ್ತೆ ಮೊಬೈಲ್: ಲಷ್ಕರ್ ಉಗ್ರನ ಬಿಂದಾಸ್ ಲೈಫ್ ಹೀಗಿದೆ ನೋಡಿ!

ಪರಪ್ಪನ ಅಗ್ರಹಾರಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ ಟೀಕೆಗೆ ಗ್ರಾಸವಾಗಿತ್ತು. ವಿಚಾರಣಾಧೀನ ಕೈದಿಗಳಿಗೆ LED ಟಿವಿ ಸೌಲಭ್ಯದ ಜೊತೆಗೆ ಅಡುಗೆ ಮಾಡಿಕೊಳ್ಳಲು ಒಲೆ, ಪಾತ್ರೆ, ಅಡುಗೆ ಪದಾರ್ಥಗಳೂ ಸಿಗುತ್ತಿವೆ. ಮೊಟ್ಟೆ , ಚಿಕನ್ ಐಟಂಗಳು, ಮೊಬೈಲ್, ಚಾರ್ಜರ್, ಪಾರ್ಟಿ ಮಾಡಲು ಸೌಂಡ್​ ಬಾಕ್ಸ್​ ಸೇರಿ ಐಶಾರಾಮಿ ವ್ಯವಸ್ಥೆ ನೀಡಲಾದ ಫೋಟೋ ವೈರಲ್​ ಆಗಿತ್ತು. ಈ ಹಿನ್ನಲೆ ಕೈದಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದವು. ಈ ವಿಷಯ ಮಾಸುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಐಸಿಸ್​ನ ಮೋಸ್ಟ್ ವಾಂಟೆಡ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬಾತನಿಗೂ ರಾಜಾತಿಥ್ಯ ದೊರೆಯುತ್ತಿರುವುದು ಬೆಳಕಿಗೆ ಬಂದಿದ್ದು, ಈತ ಜೈಲಿನಲ್ಲಿ ರಾಜಾರೋಷವಾಗಿ ಫೋನ್ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಇದರೊಂದಿಗೆ, ಪರಪ್ಪನ ಅಗ್ರಹಾರ ಜೈಲು ಕೈದಿಗಳು, ಭಯೋತ್ಪಾದಕರಿಗೆ ಸ್ವರ್ಗವಾಗಿ ಮಾರ್ಪಟ್ಟಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ವರದಿ: ವಿಕಾಸ್​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.