ಯಾದಗಿರಿ: ಇಂದು ಒಂದೇ ದಿನ 3 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

|

Updated on: May 29, 2021 | 10:31 PM

ಪೋಷಕರು ಮತ್ತೆ ಬಾಲಕಿಯರನ್ನ ಬಾಲ್ಯ ವಿವಾಹ ಮಾಡುವ ಲಕ್ಷಣಗಳು ಕಂಡು ಬಂದರೆ ಬಾಲಕಿಯರನ್ನು ಜಿಲ್ಲಾ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗುತ್ತೆ. ಬಾಲಕಿಯರು ವಯಸ್ಕರು ಆದ ಮೇಲೆ ಪೋಷಕರ ಬಳಿ ಕಳುಹಿಸಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ: ಇಂದು ಒಂದೇ ದಿನ 3 ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಬಾಲ್ಯ ವಿವಾಹ ತಡೆದ ಅಧಿಕಾರಿಗಳು
Follow us on

ಯಾದಗಿರಿ: ಕೊರೊನಾ ಲಾಕ್​ಡೌನ್ ಕಾಲದಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದು, ಇಂದು ಅಧಿಕಾರಿಗಳು ದಾಲಿ ನಡೆಸಿ ಮೂರು ಬಾಲ್ಯ ವಿವಾಹಗಳನ್ನ ತಡೆದಿದ್ದಾರೆ. ಜಿಲ್ಲೆಯ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ 24 ವರ್ಷದ ಯುವಕನ ಜತೆ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮದುವೆಯನ್ನು ಇಂದು ನಿಶ್ಚಯಿಸಲಾಗಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರಭಾಕರ್ ಕವಿತಾಳ್ ಮಾರ್ಗದರ್ಶನ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಹಾಗೂ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ.

ಜತೆಗೆ ಇನ್ನೊಂದು ಪ್ರಕರಣದಲ್ಲಿ ಚಿಂತನಹಳ್ಳಿ ಗ್ರಾಮದ ಗವಿ ಸಿದ್ದಲಿಂಗೆಶ್ವರ ದೇವಸ್ಥಾನದ ಬಳಿ ಗುರುಮಠಕಲ್ ಪಟ್ಟಣದ 17 ವರ್ಷದ ಬಾಲಕಿಗೆ ಪಟ್ಟಣದ 22 ವರ್ಷದ ಯುವಕ ಜೊತೆ ಮದುವೆ ಮಾಡಲಾಗುತ್ತಿತ್ತು. ಅಧಿಕಾರಿಗಳು ಸೂಕ್ತ ಸಮಯದಲ್ಲಿ ದಾಳಿ ನಡೆಸಿ ಮದುವೆಯನ್ನು ನಿಲ್ಲಿಸಿದ್ದಾರೆ. ಇನ್ನು ಯಾದಗಿರಿ ತಾಲೂಕಿನ ಎಲ್ಹೇರಿ ಗ್ರಾಮದಲ್ಲೂ ಸಹ ಇಂದು ಬಾಲ್ಯ ವಿವಾಹ ನಡೆಯುತ್ತಿತ್ತು. ಎಲ್ಹೇರಿ ಗ್ರಾಮದ 17 ವರ್ಷದ ಬಾಲಕಿಗೆ ಗುರುಮಠಕಲ್ ಪಟ್ಟಣದ 20 ವರ್ಷದ ಯುವಕನ ಜತೆ ಮದುವೆ ಮಾಡಲಾಗುತ್ತಿತ್ತು. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಮೂರು ಮದುವೆಯನ್ನು ತಡೆದ ಅಧಿಕಾರಿಗಳು ಬಾಲಕಿಯರ ಪೋಷಕರಿಂದ ಮುಚ್ಚಳಿಕೆ ಬರಿಸಿಕೊಂಡು ಬಾಲ್ಯ ವಿವಾಹ ಮಾಡದಂತೆ ಖಡಕ್ ಸೂಚನೆ ನೀಡಿದ್ದಾರೆ. ಇನ್ನು ಸೋಮವಾರ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು ಪಡಿಸುವಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು ಪಡಿಸಿದ ಬಳಿಕ ಬಾಲ್ಯ ವಿವಾಹ ಮಾಡದಂತೆ ಎಚ್ಚರಿಕೆ ಕೊಟ್ಟು ಪೋಷಕರ ಜತೆ ಕಳಿಸಲಾಗುತ್ತದೆ. ಇನ್ನು ಪೋಷಕರು ಮತ್ತೆ ಬಾಲಕಿಯರನ್ನ ಬಾಲ್ಯ ವಿವಾಹ ಮಾಡುವ ಲಕ್ಷಣಗಳು ಕಂಡು ಬಂದರೆ ಬಾಲಕಿಯರನ್ನು ಜಿಲ್ಲಾ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗುತ್ತೆ. ಬಾಲಕಿಯರು ವಯಸ್ಕರು ಆದ ಮೇಲೆ ಪೋಷಕರ ಬಳಿ ಕಳುಹಿಸಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Covid Warriors: ಇನ್ಮುಂದೆ ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರೂ ಕೊವಿಡ್ ವಾರಿಯರ್ಸ್​

ಸಹಾಯಧನ, ಪಾಲನೆ, ಶಿಕ್ಷಣಕ್ಕೆ ವ್ಯವಸ್ಥೆ; ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲಸೇವಾ ಯೋಜನೆ ಘೋಷಣೆ

(Officers stopped 3 child marriage today in Yadgir)

Published On - 10:30 pm, Sat, 29 May 21