ದಾವಣಗೆರೆ: ಜನರು ತಮ್ಮ ಊರಿಂದ ಪಕ್ಕದ ಊರಿಗೆ ಅಥವಾ ಹೊಲ ಗದ್ದೆಗೆ ಹೋಗಲು ಅವಲಂಬಿಸಿದ್ದ ಸೇತುವೆಗಳು ಹಾಳಾಗಿವೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಯಮನಂತೆ ಕಾದು ಕುಳಿತ ಸೇತುವೆಯ ಮೇಲೆ ಜನರು ಜೀವದ ಹಂಗು ತೊರೆದು ಮುಂದೆ ಸಾಗುವಂತಾಗಿದೆ.
ದಾವಣಗೆರೆ ತಾಲೂಕಿನ ಅಣಬೇರು, ಶಂಕರನಹಳ್ಳಿ, ಬಾಡಾ, ಮಾಯಕೊಂಡ ಹೀಗೆ ಹತ್ತಾರು ಹಳ್ಳಿಯ ಜನ್ರಿಗೆ ಆಸರೆಯಾಗಿದ್ದ ಸೇತುವೆ ಹಾಳಾಗಿ ಎರಡು ವರ್ಷಗಳೇ ಕಳೆದಿವೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಭದ್ರಾ ಕಾಲುವೆಗೆ ಅಡ್ಡಲಾಗಿದ್ದ ಸೇತುವೆ ಮುರಿದು ಬಿದ್ದಿದೆ.
ಆರು ಗ್ರಾಮಗಳ ಜನ ತಮ್ಮ ಜಮೀನಿಗೆ ಹೋಗಬೇಕು ಅಂದ್ರೆ ಈ ಸೇತುವೆ ಮೇಲೆ ಹೋಗಬೇಕು. ಇನ್ನು ಭತ್ತದ ಹುಲ್ಲು, ಅಡಕೆ ತರಬೇಕಿದ್ದರೇ 20 ಕಿಲೋ ಮೀಟರ್ ಸುತ್ತು ಹಾಕಿಕೊಂಡು ಬರುವ ಪರಿಸ್ಥಿತಿ ಇಲ್ಲಿನ ಹಳ್ಳಿ ಜನರಿಗೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಏನೂ ಪ್ರಯೋಜನ ಆಗಿಲ್ಲ ಎಂದು ಜನ ಆರೋಪಿಸಿದ್ದಾರೆ.
ಇನ್ನು ಈ ಗ್ರಾಮಗಳ ಸುತ್ತ ಹದಿನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಸೇತುವೆಗಳಿವೆ. ಒಂದು ಸೇತುವೆ ಈಗಾಗಲೇ ಸಂಪೂರ್ಣ ಹಾಳಾಗಿದೆ. ಸುಮಾರು 50ಹಳ್ಳಿಗರಿಗೆ ಆಸರೆಯಾಗಿದ್ದ ನಾಲ್ಕು ಸೇತುವೆಗಳಲ್ಲಿ ಮೂರು ಸೇತುವೆ ಮೇಲೆ ಜನ ಓಡಾಡ್ತಾರೆ. ಆದ್ರೆ ಈ ಸೇತುವೆಗಳೂ ಕೂಡ ಅವನತಿ ಅಂಚಿನಲ್ಲಿವೆ.
ಈ ಸೇತುವೆಗಳು ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಈಗಾಗ್ಲೇ ಒಂದು ಸೇತುವೆಗೆ ಒಂದು ಕೋಟಿ 25 ಲಕ್ಷ ರೂಪಾಯಿ ಯೋಜನೆ ರೂಪಿಸಿ ನೀರಾವರಿ ಇಲಾಖೆ ಇಂಜಿನಿಯರ್ಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ.
Published On - 4:08 pm, Wed, 27 November 19