ಬೀದರ್: ಗ್ರಾಮೀಣ ಜನರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಬಳ ನೀಡಿ ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ ಪ್ರತಿ ತಿಂಗಳು ಸಂಬಳ ಪಡೆಯುವ ವೈದ್ಯರು ಮಾತ್ರ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿಲ್ಲ. ಹೀಗಾಗಿ ತುರ್ತು ಚಿಕಿತ್ಸೆ ಬೇಕಾದರೆ ಗ್ರಾಮೀಣ ಜನರು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗೆ ಬರುವುದು ಅನಿವಾರ್ಯವಾಗಿದೆ. ರೋಗಿಗಳ ಸಮಸ್ಯೆಗೆ ಸ್ಪಂಧಿಸಬೇಕಾದ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 4 ಸಾರ್ವಜನಿಕ ಆರೋಗ್ಯ ಕೇಂದ್ರಗಳಿವೆ. ಇಲ್ಲಿನ ಎಲ್ಲಾ ಆಸ್ಪತ್ರೆಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿದ್ದು, ಹೈಟೆಕ್ ಮಾಧರಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಆಸ್ಪತ್ರೆಗಳಿಗೆ ಹೋಗಿ ನೋಡಿದರೆ ಮೂಲಭೂತ ಸೌಲಭ್ಯದಿಂದ ಆಸ್ಪತ್ರೆಗಳು ನಲುಗಿ ಹೋಗಿವೆ. ಇಲ್ಲಿಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಪಾಡಂತೂ ದೇವರಿಗೆ ಪ್ರೀತಿ ಎಂಬಂತಾಗಿದ್ದು, ನುರಿತ ವೈದ್ಯರ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಟ ಪಡಬೇಕಾದ ಸ್ಥಿತಿ ಇದೆ.
ಇಲ್ಲಗಳ ಸರಮಾಲೆ ಹೊದ್ದಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಬಡ ರೋಗಿಗಳಿಗೆ ಆರೋಗ್ಯ ಭಾಗ್ಯ ಕಲ್ಪಿಸಬೇಕಾಗಿದ್ದ ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನಾರೋಗ್ಯದಿಂದ ಬಳಲುತ್ತಿವೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಶುದ್ಧ ಕುಡಿಯುವ ನೀರಿಲ್ಲ. ಶೌಚಾಲಯ ಇಲ್ಲ. ವ್ಯವಸ್ಥಿತ ಕಟ್ಟಡ ಇಲ್ಲ. ಹೀಗೆ ಇಲ್ಲಗಳ ಸರಮಾಲೆ ಹೊದ್ದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸುತ್ತಲಿನ ಗ್ರಾಮಸ್ಥರು ಚಿಕಿತ್ಸೆ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಉದಾಹರಣೆಗೆ 9 ಹಳ್ಳಿಗಳ ಸುಮಾರು 32 ಸಾವಿರ ಜನರಿಗೆ ಆರೋಗ್ಯ ಸೇವೆ ಕಲ್ಪಿಸಬೇಕಿದ್ದ ಕಮಠಾಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಲವು ಕಾಯಿಲೆಗಳಿಂದ ಸೊರಗಿದೆ. ಆಪರೇಷನ್ ಥಿಯೇಟರ್ ಇದ್ದರೂ ಶಸ್ತ್ರ ಚಿಕಿತ್ಸಾ ತಜ್ಞರಿಲ್ಲ. ಬಾಣಂತಿಯರಿಗೆ ಬಿಸಿ ನೀರೂ ಇಲ್ಲ. ಕುಡಿಯುವ ನೀರೂ ಇಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಎಂಬಿಬಿಎಸ್ ವೈದ್ಯರು ಇರುವುದರಿಂದ ಅವರು ಹಾಜರಿ ಹಾಕಿ ಮನೆಗೆ ಹೋಗಿರುತ್ತಾರೆ. ಹೀಗಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಮಾತ್ರವಲ್ಲದೇ ಜಿಲ್ಲೆಯಲ್ಲಿರುವ ಶೇ. 90 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗುತ್ತಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯ ಕಡೆಗೆ ರೋಗಿಗಳು ಮುಖಮಾಡುವಂತಹ ಸ್ಥಿತಿಯುಂಟಾಗಿದೆ. ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಉತ್ತಮ ಗುಣಮಟ್ಟದ ಕಟ್ಟಡಗಳಿದ್ದರು, ವೈದ್ಯರು ಬಾರದೇ ಇರುವುದರಿಂದ ಕೆಲವೂ ಕಟ್ಟಡಗಳು ಹಾಳಾಗಿದ್ದು, ಅನೈತಿಕ ಚಟುವಟಿಕೆಗಳ ಸ್ಥಾನಗಳಾಗಿವೆ. ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯಾರಂಭಗೊಂಡು ದಶಕಗಳು ಕಳೆದರು ಇಲ್ಲಿಗೆ ನುರಿತ ವೈದ್ಯರನ್ನು ಮತ್ತ ನರ್ಸ್ಗಳನ್ನು ನೇಮಕಮಾಡಿಲ್ಲ. ಹೀಗಾಗಿ ರೋಗಿಗಳಿಗೆ ಸಿಗಬೇಕಾದ ಸಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ಆಗರವಾಗುತ್ತಿವೆ.
ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ
ಇದು ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯಾದರೆ, ಜಿಲ್ಲೆಯಲ್ಲಿ ಆಯುಷ್ಯ, ಆಯುರ್ವೇದ, ಯೋಗಾ, ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿಯಂತಹ 26 ಆಸ್ಪತ್ರೆಗಳಿದ್ದು, ನುರಿತ ವೈದ್ಯರು ಸೇರಿ 58 ಜನರ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಆದರೆ ಯಾರೊಬ್ಬ ವೈದ್ಯರು ಕೂಡಾ ಆಸ್ಪತ್ರೆಗೆ ಬಾರದಿರುವುದರಿಂದ ಎಲ್ಲಾ ಆಸ್ಪತ್ರೆಗಳು ವೈದ್ಯರಿಲ್ಲದೇ ಬೀಕೋ ಎನ್ನುತ್ತಿವೆ. ಇನ್ನೂ ಸರ್ಕಾರದಿಂದ ಸರಬರಾಜಾಗುವ ಲಕ್ಷಾಂತರ ರೂಪಾಯಿ ಔಷಧಿಗಳು ಬಳಕೆಯಾಗದೆ ಹಾಳಾಗುತ್ತಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ವೈದ್ಯರು ಆಸ್ಪತ್ರೆಯಲ್ಲಿದ್ದಾರೆಂದು ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಬರುವಿಕೆಗಾಗಿ ಗಂಟೆ ಗಟ್ಟಲೆ ಕಾದು ಮನಗೆ ವಾಪಾಸ್ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ವಿಚಾರದ ಬಗ್ಗೆ ಆಯುಷ್ಯ ಇಲಾಖೆಯ ಅಧಿಕಾರಿಯನ್ನು ಕೇಳಿದರೇ ಅವರು ಕೂಡಾ ಇದನ್ನ ಒಪ್ಪಿಕೊಳ್ಳುತ್ತಾರೆ. ಬೀದರ್ ಜಿಲ್ಲೆಯಲ್ಲಿ 26 ಆಸ್ಪತ್ರೆಗಳಿದ್ದು, ವೈದ್ಯರು ಆಸ್ಪತ್ರೆಗೆ ಬರುತ್ತಾರೆ. ನಾನು ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆಂದು ಹೇಳುತ್ತಿದ್ದಾರೆ.
ಇದನ್ನೂ ಓದಿ
ಬಜೆಟ್ ಅಧಿವೇಶನ: ಕರ್ನಾಟಕ ವಿಧಾನಸೌಧದಲ್ಲಿ ಸಿಡಿ ಪ್ರದರ್ಶನ ಮಾಡಿದ ಕೈ ನಾಯಕರು
ಅಧಿವೇಶನದಲ್ಲಿ ಇಂದಾದರೂ ಸಿಡಿ ವಿಷಯ ಬಿಡಿ, ಬಜೆಟ್ ಬಗ್ಗೆ ಚರ್ಚೆ ನಡೆಸಿ; ವಿಪಕ್ಷಗಳಿಗೆ ಸಿಎಂ ಯಡಿಯೂರಪ್ಪ ಮನವಿ