ಅಧಿವೇಶನದಲ್ಲಿ ಇಂದಾದರೂ ಸಿಡಿ ವಿಷಯ ಬಿಡಿ, ಬಜೆಟ್ ಬಗ್ಗೆ ಚರ್ಚೆ ನಡೆಸಿ; ವಿಪಕ್ಷಗಳಿಗೆ ಸಿಎಂ ಯಡಿಯೂರಪ್ಪ ಮನವಿ
ರಮೇಶ್ ಜಾರಕಿಹೊಳಿ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ವಿರೋಧ ಪಕ್ಷದವರು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಆ ಯುವತಿ ಕೈ ಸಿಗುತ್ತಿಲ್ಲ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ನವರು ಕುಂಟು ನೆಪ ಒಡ್ಡಿ ನಿನ್ನೆ ಧರಣಿ ಮಾಡಿದ್ದರು. ಆ ಹೆಣ್ಣುಮಗಳು ಬಂದು ಸ್ಪಷ್ಟವಾಗಿ ಬಂದು ದೂರು ಕೊಡಲಿಲ್ಲ. ಇಷ್ಟಾದರೂ ಧರಣಿ ಮಾಡುವುದು ಎಷ್ಟರಮಟ್ಟಿಗೆ ಸರಿ
ಬೆಂಗಳೂರು: ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಾಗಿದೆ. ಪ್ರಕರಣವನ್ನು SIT ತನಿಖೆ ಮಾಡ್ತಿದೆ. ಆ ಹೆಣ್ಣುಮಗಳು ಬಂದು ಸ್ಪಷ್ಟವಾಗಿ ದೂರು ಕೊಡಲಿಲ್ಲ. ಹೀಗಿದ್ದರೂ ವಿಪಕ್ಷದವರು ಅಧಿವೇಶನದಲ್ಲಿ ಧರಣಿ ಮಾಡುವುದು ಎಷ್ಟು ಸರಿ? ಕುಂಟುನೆಪ ಹೇಳಿ ನಿನ್ನೆ ಸದನದಲ್ಲಿ ಧರಣಿ ಮಾಡಿದರು. ಚರ್ಚಿಸಲು ಬೇರೆ ವಿಷಯವಿಲ್ಲದೆ ಕಾಲಹರಣ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯೋಕೆ ಅವಕಾಶ ಕೊಡಿ ಎಂದು ವಿಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಪಕ್ಷ ಕಾಂಗ್ರೆಸ್ ಸದಸ್ಯರನ್ನು ಬೆಳ್ಳಂಬೆಳಗ್ಗೆ ವಿಧಾನಸೌಧದದಲ್ಲಿ ಮನವಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ವಿರೋಧ ಪಕ್ಷದವರು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಆ ಯುವತಿ ಕೈ ಸಿಗುತ್ತಿಲ್ಲ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ನವರು ಕುಂಟು ನೆಪ ಒಡ್ಡಿ ನಿನ್ನೆ ಧರಣಿ ಮಾಡಿದ್ದರು. ಆ ಹೆಣ್ಣುಮಗಳು ಬಂದು ಸ್ಪಷ್ಟವಾಗಿ ಬಂದು ದೂರು ಕೊಡಲಿಲ್ಲ. ಇಷ್ಟಾದರೂ ಧರಣಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಿಎಂ ಯಡಿಯೂರಪ್ಪ ಕೇಳಿದ್ದಾರೆ.
ನಿನ್ನೆ ಮಧ್ಯಾಹ್ನದ ಅಧಿವೇಶನದಲ್ಲಿ ಸಿಡಿಯದ್ದೇ ಗದ್ದಲ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ, ಯುವತಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸದನದಲ್ಲಿ ಚರ್ಚೆ ಮುಂದುವರೆಸಿದ ಅವರು, ಇದುವರೆಗೂ ಆ ಯುವತಿಯನ್ನು ಪತ್ತೆ ಹಚ್ಚಲು ಆಗಿಲ್ಲವೆ? ಆ ಯುವತಿಯ ಸಮ್ಮತಿ ಇಲ್ಲ ಎಂದರೆ ಅದು ಅತ್ಯಾಚಾರವೇ ಆಗುತ್ತದೆ. ಇಷ್ಟು ಗಂಭೀರ ಪ್ರಕರಣದಲ್ಲಿ ಕೇಸ್ ರಿಜಿಸ್ಟರ್ ಮಾಡದೇ ವಿಳಂಬ ಮಾಡಿದ್ದೇಕೆ? ಸರ್ಕಾರ ರಮೇಶ್ ಜಾರಕಿಹೊಳಿ ಪರ ತನಿಖೆ ನಡೆಸುತ್ತಿದೆಯೇ ಹೊರತು, ಯುವತಿ ಆಯಾಮದಲ್ಲಿ ನಡೆಸುತ್ತಿಲ್ಲ. ಕೂಡಲೇ ಐಪಿಸಿ ಸೆಕ್ಷನ್ 376 ಪ್ರಕಾರ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಿ ಯುವತಿಗೆ ನ್ಯಾಯ ಒದಗಿಸಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದರು.
6 ಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಇವರಿಂದ ಆ ಯುವತಿಗೆ ರಕ್ಷಣೆ ಕೊಡುವ ಕೆಲಸ ಆಗುತ್ತಿಲ್ಲ. ಪ್ರಕರಣ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ CD ಮಾಡುವ ಗ್ಯಾಂಗ್ ಇದೆ ಎಂದು ಹೇಳಿದ್ದಾರೆ. ಸಿಎಂಗೆ CD ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಈ ರೀತಿಯಾಗಿ ಬಿಜೆಪಿ ಶಾಸಕ ಯತ್ನಾಳ್ ಹೇಳುತ್ತಿದ್ದಾರೆ. ಈ ಕುರಿತು ಸಹ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ. ಇಲ್ಲದಿದ್ದರೆ ಇಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುವುದಿಲ್ಲ. ಈ ಪ್ರಕರಣದಲ್ಲಿ ಒಂದು ಒಳ್ಳೆಯ ಸಂದೇಶ ಹೋಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.ಕೋರ್ಟ್ಗೆ ಹೋದ 6 ಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಎಲ್ಲಾ 6 ಸಚಿವರುಗಳು ತಕ್ಷಣ ರಾಜೀನಾಮೆ ನಿಡಬೇಕು ಎಂದು ಒತ್ತಾಯಿಸಿದ್ದರು.
ಲೈಂಗಿಕ ದೌರ್ಜನ್ಯ ಆಗಿದೆ ಅಂತ ಯುವತಿ ಎಲ್ಲೂ ಹೇಳಿಯೇ ಇಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತಿನ ವೇಳೆ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ಆ ಯುವತಿ ಆ ರೀತಿ ಹೇಳಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಹೇಳಿ. ಯುವತಿ ನನ್ನ ಮೇಲೆ ದೌರ್ಜನ್ಯ ಆಗಿದೆ ಅಂತಾ ಹೇಳೇ ಇಲ್ಲ. ಇಲ್ಲದ ಸ್ಟೇಟ್ಮೆಂಟ್ನ್ನು ನೀವ್ಯಾಕೆ ಹೇಳುತ್ತಿದ್ದೀರಾ ಎಂದು ಸಚಿವ ಜಗದೀಶ್ ಶೆಟ್ಟರ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಯುವತಿ ಹೇಳಿಕೆಯ ಬಗ್ಗೆ ಮಾತ್ರ ಸದನದಲ್ಲಿ ನೀವು ಹೇಳಿ. ಯುವತಿ ಹೇಳದೆ ಇರುವುದನ್ನು ಸದನದಲ್ಲಿ ಹೇಳಬೇಡಿ ಎಂದು ಜಗದೀಶ್ ಶೆಟ್ಟರ್ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದರು.
ಇದನ್ನೂ ಓದಿ: ‘ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆಯಾಗಲಿ‘; ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ
ಯುವತಿ ಪತ್ತೆಗೆ 22 ಅಧಿಕಾರಿಗಳ ತಂಡ ರಚನೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
Published On - 11:36 am, Tue, 23 March 21