ಊರ ಜನರು ಒಂದೆಡೆ ಸೇರಿ ಊಟ ಮಾಡುವ ಊರೂಟ: ಹಾವೇರಿ ಮಠದಲ್ಲೊಂದು ವಿಶೇಷತೆ

ನಗರದ ಸಿಂದಗಿ ಶಾಂತವೀರೇಶ್ವರ ಮಠದಲ್ಲಿ ಪ್ರತಿವರ್ಷ ಮಠದ ಸ್ವಾಮೀಜಿ ಶಾಂತವೀರೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ನಡೆಯುತ್ತದೆ. ಅದರ ಪ್ರಯುಕ್ತ ಮಠದಲ್ಲಿ ಜನರಿಗೆ ಊರೂಟ ಮಾಡಿಸುವ ಸಂಪ್ರದಾಯವಿದೆ. ಮಠದಲ್ಲಿ ಹಲವಾರು ವರ್ಷಗಳಿಂದ ಊರೂಟದ ಸಂಪ್ರದಾಯ ನಡೆದುಕೊಂಡು ಬಂದಿದೆ.

ಊರ ಜನರು ಒಂದೆಡೆ ಸೇರಿ ಊಟ ಮಾಡುವ ಊರೂಟ: ಹಾವೇರಿ ಮಠದಲ್ಲೊಂದು ವಿಶೇಷತೆ
ಸಿಂದಗಿ ಶಾಂತವೀರೇಶ್ವರ ಮಠದಲ್ಲಿ ಊರೂಟ
Follow us
sandhya thejappa
|

Updated on: Mar 23, 2021 | 10:48 AM

ಹಾವೇರಿ: ವಟುಗಳನ್ನು ಭಕ್ತರೆ ತಮ್ಮ ತಮ್ಮ ಮನೆಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಊಟ ಮಾಡಿಸುವುದು ಸಾಮಾನ್ಯ. ಆದರೆ ಹಾವೇರಿ ನಗರದಲ್ಲಿರುವ ಸಿಂದಗಿ ಮಠದಲ್ಲಿ ವಟುಗಳೆ ಭಕ್ತರನ್ನು ಮಠಕ್ಕೆ ಆಹ್ವಾನಿಸಿ ಮಠದಲ್ಲಿ ಭಕ್ತರಿಗೆ ಊಟ ನೀಡುತ್ತಾರೆ. ಮಠದಲ್ಲಿ ನಡೆಯುವ ಊರೂಟಕ್ಕೆ ಸಾವಿರಾರು ಜನ ಭಕ್ತರು ಆಗಮಿಸಿ ಮಠದಲ್ಲಿನ ಊಟ ಮಾಡಿ ಪುನೀತರಾಗುತ್ತಾರೆ. ಜಾತಿ ಬೇಧವೆನಿಸದೆ ಸರ್ವ ಜನಾಂಗದವರು ಊಟ ಮಾಡಿ ಊರೂಟದ ಸಂಭ್ರಮ ಆಚರಿಸುತ್ತಾರೆ.

ನಗರದ ಸಿಂದಗಿ ಶಾಂತವೀರೇಶ್ವರ ಮಠದಲ್ಲಿ ಪ್ರತಿವರ್ಷ ಮಠದ ಸ್ವಾಮೀಜಿ ಶಾಂತವೀರೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ನಡೆಯುತ್ತದೆ. ಅದರ ಪ್ರಯುಕ್ತ ಮಠದಲ್ಲಿ ಜನರಿಗೆ ಊರೂಟ ಮಾಡಿಸುವ ಸಂಪ್ರದಾಯವಿದೆ. ಮಠದಲ್ಲಿ ಹಲವಾರು ವರ್ಷಗಳಿಂದ ಊರೂಟದ ಸಂಪ್ರದಾಯ ನಡೆದುಕೊಂಡು ಬಂದಿದೆ. ಮಠದಲ್ಲಿ ಪೀಠಾಧಿಪತಿಗಳಾಗಿ ಯಾವುದೇ ಸ್ವಾಮೀಜಿ ಇಲ್ಲ. ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಕೆಲವು ಮಠಾದೀಶರು ಮಠಕ್ಕೆ ಮಾರ್ಗದರ್ಶಕರಾಗಿದ್ದಾರೆ. ಮಠದಲ್ಲಿ ನೂರಕ್ಕೂ ಅಧಿಕ ಜನ ವಟುಗಳು ಅಭ್ಯಾಸ ಮಾಡುತ್ತಾರೆ. ವಟುಗಳ ಜೊತೆಗೆ ಆಗಾಗ ಬೇರೆ ಬೇರೆ ಮಠಗಳ ಸ್ವಾಮೀಜಿಗಳು ಮಠಕ್ಕೆ ಬಂದು ಹೋಗುತ್ತಾರೆ.

ಊರಿಗೆ ಊಟ ಹಾಕುವ ಊರೂಟ ವರ್ಷಪೂರ್ತಿ ವಟುಗಳು ಭಕ್ತರ ಮನೆ ಮನೆಗೆ ಹೋಗಿ ಕಜ್ಜಾಯ ತಂದು ಊಟ ಮಾಡುತ್ತಾರೆ. ಮಠದ ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯಸ್ಮರಣೋತ್ಸವ ಸಮಯದಲ್ಲಿ ಮಾತ್ರ ಮಠದಲ್ಲಿನ ವಟುಗಳು ಹಾವೇರಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಊಟ ಉಣಬಡಿಸುತ್ತಾರೆ. ಮಠದಲ್ಲಿನ ವಟುಗಳೆ ಭಕ್ತರಿಗಾಗಿ ಅಡುಗೆ ತಯಾರಿಸಿ, ಸಾವಿರಾರು ಜನ ಭಕ್ತರಿಗೆ ವಟುಗಳೆ ಊಟವನ್ನು ಬಡಿಸುತ್ತಾರೆ. ಊಟ ಮಾಡಿದ ಮೇಲೆ ಭಕ್ತರು ಊಟ ಮಾಡಿದ ತಟ್ಟೆಯನ್ನು ವಟುಗಳೆ ತೊಳೆಯುತ್ತಾರೆ. ಊರೂಟದ ಸಂದರ್ಭದಲ್ಲಿ ಮಠದಲ್ಲಿನ ವಟುಗಳು ಭಕ್ತರಿಗಾಗಿ ಮಾಡುವ ಸೇವೆಗೆ ಬೇರೆ ಬೇರೆ ಮಠಗಳಿಂದ ಆಗಮಿಸಿರುವ ಮಠದಲ್ಲಿ ವೇದ, ಪುರಾಣ, ಶಾಸ್ತ್ರ ಅಧ್ಯಯನ ಮಾಡಿ ಹೋಗಿರುವ ಸ್ವಾಮೀಜಿಗಳು ಸಹ ಸಾಥ್ ನೀಡುತ್ತಾರೆ.

ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತರು

ವಟುಗಳೆ ತಯಾರಿಸಿದ ಊಟ

ವಿಶೇಷ ಭೋಜನ ವ್ಯವಸ್ಥೆ ಊರೂಟಕ್ಕೆ ಎಂದು ಸಾವಿರಾರು ಜನರು ಬರುತ್ತಾರೆ. ರಾತ್ರಿ ಎಂಟು ಗಂಟೆಗೆ ಊಟ ಆರಂಭವಾದರೆ ತಡರಾತ್ರಿ ಒಂದು ಗಂಟೆಯವರೆಗೂ ಭಕ್ತರಿಗೆ ಊಟ ನೀಡಲಾಗುತ್ತದೆ. ಊರೂಟಕ್ಕೆಂದು ಬರುವ ಭಕ್ತರಿಗಾಗಿ ಮಾದಲಿ, ಜೊತೆಗೆ ಹಾಲು, ತುಪ್ಪ, ಕರಿಂಡಿ, ಖಡಕ್ ರೊಟ್ಟಿ, ಕೆಂಪು ಚಟ್ನಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಮಾಡಲಾಗಿರುತ್ತದೆ. ಮಠದಲ್ಲಿನ ವಟುಗಳೆ ಬಾಣಸಿಗರಂತೆ ಅಡುಗೆ ಮಾಡುತ್ತಾರೆ. ಬೆಳಿಗ್ಗೆಯಿಂದಲೇ ಅಡುಗೆ ಮಾಡುವ ಕಾರ್ಯ ಶುರುವಾಗಿರುತ್ತದೆ. ರಾತ್ರಿ ಎಂಟು ಗಂಟೆಗೆ ಊಟ ಆರಂಭವಾಗುತ್ತದೆ. ಸಾಕಷ್ಟು ಸಂಖ್ಯೆಯ ಜನರು ಮಠಕ್ಕೆ ಬಂದು ವಟುಗಳು ಬಡಿಸುವ ಊರೂಟವನ್ನು ಸವಿದು ಊರೂಟದ ಸಂಭ್ರಮ ಆಚರಿಸುತ್ತಾರೆ.

ಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತರು

ಸಿಂದಗಿ ಮಠ

ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ವಯಸ್ಸಿನ ಬೇಧವಿಲ್ಲದೆ, ಜಾತಿಯ ಹಂಗಿಲ್ಲದೆ ಎಲ್ಲರೂ ಮಠಕ್ಕೆ ಬಂದು ಸರದಿಯಲ್ಲಿ ನಿಂತು ಊಟ ಸವಿದು ಮನೆಗೆ ವಾಪಸಾಗುತ್ತಾರೆ. ಜನರೂ ಸಹ ಬಡವ, ಶ್ರೀಮಂತ, ಆ ಜಾತಿ, ಈ ಜಾತಿ ಎನ್ನದೆ ಎಲ್ಲರೂ ಒಂದಾಗಿ ಮಠಕ್ಕೆ ಬಂದು ಮಠದ ಆವರಣದಲ್ಲಿ ಎಲ್ಲರೂ ಸಾಮೂಹಿಕವಾಗಿ ವಟುಗಳು ತಯಾರಿಸಿದ ಊಟವನ್ನು ಸವಿದು ಮನೆಯತ್ತ ವಾಪಸ್ಸಾಗುತ್ತಾರೆ. ಇದೊಂದು ವಿಶೇಷವಾದ ಕಾರ್ಯಕ್ರಮ ಎನ್ನುತ್ತಾರೆ ಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ.

ಮಠಗಳು ಮತ್ತು ಭಕ್ತರಿಗೂ ಸಿಂದಗಿ ಶಾಂತವೀರೇಶ್ವರ ಮಠದಲ್ಲಿ ಅವಿನಾಭಾವ ಸಂಬಂಧ ಇದೆ ಎನ್ನುವುದಕ್ಕೆ ಊರೂಟವೇ ಸಾಕ್ಷಿಯಾಗಿದೆ. ವರ್ಷವಿಡಿ ಮಠದ ವಟುಗಳಿಗೆ ಕಜ್ಜಾಯ ನೀಡಿ ಜನರು ಅವರಿಗೆ ಊಟ ಹಾಕಿದರೆ ವಟುಗಳೆಲ್ಲ ಸೇರಿಕೊಂಡು ಊರ ಜನರನ್ನು ಒಂದೆಡೆ ಸೇರಿಸಿ ಊರೂಟ ಹಾಕಿ ಭಕ್ತರು ಊಟ ಮಾಡಿದ ತಟ್ಟೆಯನ್ನೂ ತೊಳೆದು ನಾವೆಲ್ಲರೂ ಒಂದು ಎಂಬ ಸಂದೇಶ ಸಾರುತ್ತಾರೆ ಎಂದು ಮಠದ ಊರೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮಠದ ಭಕ್ತ ಮಾಲತೇಶ.

ಇದನ್ನೂ ಓದಿ

ಹೃದಯಾಘಾತದಿಂದ ಕಡೂರು ಯೋಧ ಮಂಜಪ್ಪ ಲಖನೌನಲ್ಲಿ ಸಾವು

National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್​ಕುಮಾರ್​​ಗೂ ಇದೆ ಸಂಬಂಧ!