ಬೆಂಗಳೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ: ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾ
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆಯೇ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಗದಗ ಸೇರಿದಂತೆ ಕರ್ನಾಟಕದ ವಿವಿಧೆಡೆ 8 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ದಾಖಲೆಗಳು, ಕಡತಗಳ ಪರಿಶೀಲನೆ ಮುಂದುವರಿದಿದೆ. ಎಲ್ಲೆಲ್ಲಿ, ಯಾರ್ಯಾರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಯಿತು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 8: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೆಲೆ ದಾಳಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸದ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೆ, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ ಮನೆ, ಬೆಳಗಾವಿ ಜಿಲ್ಲೆಯ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್, ತುಮಕೂರಿನ ನಿವೃತ್ತ ಆರ್ಟಿಒ ಅಧಿಕಾರಿ ಎಸ್.ರಾಜು ಮನೆ ಮೇಲೆಯೂ ದಾಳಿ ನಡೆದಿದೆ.
ಗದಗ ಜಿಲ್ಲೆಯ ಹಲವೆಡೆ ದಾಳಿ
ಗದಗ ಜಿಲ್ಲೆಯ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಗದಗ-ಬೆಟಗೇರಿ ನಗರಸಭೆ ಇಂಜಿಯರ್ ಕಚೇರಿ, ಮನೆಗಳ ಮೇಲೆ, ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಮನೆ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಐದು ಕಡೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಈ ಕ್ರಮ ಕೈಗೊಂಡಿದೆ.
ಬಳ್ಳಾರಿಯಲ್ಲೂ ಲೋಕಾ ರೇಡ್
ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೆ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಮನೆ ಮೇಲೆಯೂ ದಾಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಶೋಧ
ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ನಗರದ ಲಕ್ಷ್ಮೀಟೆಕ್ನಲ್ಲಿರುವ ಪ್ರಕಾಶ್ ನಿವಾಸ, ತಹಶೀಲ್ದಾರ್ ಕಚೇರಿ, ನಿಪ್ಪಾಣಿಯ ನಿವಾಸ ಸೇರಿ 6 ಕಡೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಲೋಕಾಯುಕ್ತ ಎಸ್‌ಪಿ ಹನುಮಂತರಾಯಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಎಚ್ಎಂಪಿವಿ ವೈರಸ್: ಆರೋಗ್ಯ ಇಲಾಖೆ ಜತೆ ಸಿಎಂ ಸಿದ್ದರಾಮಯ್ಯ ಸಭೆ, ಜನರಿಗೆ ಅಭಯ
ತುಮಕೂರು ಆರ್ಟಿಒದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಎಸ್ ರಾಜು ಮನೆ ಮೇಲೆ ದಾಳಿ ನಡೆದಿದೆ. ಎಸ್ ರಾಜು ಕಳೆದ ವರ್ಷ ನಿವೃತ್ತಿ ಹೊಂದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 am, Wed, 8 January 25