KRS Dam: 156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್ ಡ್ಯಾಂ, ನಿರ್ಮಾಣದ ಬಳಿಕ ಮೊದಲ ಬಾರಿಗೆ ದಾಖಲೆ

KRS Dam: 156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್ ಡ್ಯಾಂ, ನಿರ್ಮಾಣದ ಬಳಿಕ ಮೊದಲ ಬಾರಿಗೆ ದಾಖಲೆ

ಪ್ರಶಾಂತ್​ ಬಿ.
| Updated By: Ganapathi Sharma

Updated on:Jan 08, 2025 | 12:17 PM

ಕರ್ನಾಟಕದ ಪ್ರಸಿದ್ಧ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣದ ಬಳಿಕ ಈವರೆಗೆ ಮಾಡಿರದ ಸಾಧನೆ ಮಾಡಿ ದಾಖಲೆ ಬರೆದಿದೆ. ಮಂಡ್ಯ ಜಿಲ್ಲೆಯ ಕೆಆರ್​ಎಸ್ ಡ್ಯಾಂ ನಿರಂತರ 155 ದಿನಗಳ ಕಾಲ ಗರಿಷ್ಠ ಮಟ್ಟದಲ್ಲಿ ನೀರಿನ ಸಂಗ್ರಹ ಕಾಯ್ದುಕೊಂಡಿದೆ. ಅಣೆಕಟ್ಟೆಯ ಇತಿಹಾಸದಲ್ಲಿ ಈ ಸಾಧನೆ ಇದೇ ಮೊದಲಾಗಿದೆ.

ಮಂಡ್ಯ, ಜನವರಿ 8: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ‌ಕೆಆರ್​ಎಸ್ ಜಲಾಶಯ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಬರೆದಿದೆ. ಡ್ಯಾಂ ಇದೇ ಮೊದಲ ಬಾರಿಗೆ ನಿರಂತರ 156 ದಿನಗಳ ಕಾಲ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಜನವರಿ 8ರ ಬುಧವಾರ ಬೆಳಗ್ಗೆ ಸಹ ಜಲಾಶಯದ ನೀರಿನ ಮಟ್ಟ 124 ಅಡಿ ಇದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 124.30 ಅಡಿ ಭರ್ತಿ ನೀರಿದೆ.

92 ವರ್ಷಗಳ ಬಳಿಕ 156 ದಿನಗಳ ಕಾಲ ಸಂಪೂರ್ಣವಾಗಿ ಭರ್ತಿ

ಕೆಆರ್​ಎಸ್ ಜಲಾಶಯ ಹಳೇ ಮೈಸೂರು ಭಾಗದ ಅನ್ನದಾತರ ಜೀವನಾಡಿ. ಲಕ್ಷಾಂತರ ರೈತರು ಈ ಒಂದು ಜಲಾಶಯದಿಂದ ಬದುಕು ಕಟ್ಟಿಕೊಂಡಿದ್ದಾರೆ. ಇದೇ ಜಲಾಶಯ ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳ ಕುಡಿಯುವ ನೀರಿನ ಆಧಾರ. ಇಂತಹ ಜಲಾಶಯ ಸದಾ ಸುದ್ದಿಯಲ್ಲಿ ಕೂಡ ಇರುತ್ತದೆ. ಜಲಾಶಯ ಸಂಪೂರ್ಣವಾಗಿ ಭರ್ತಿ ಆಗದೇ ಇದ್ದಾದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ದೊಡ್ಡ
ಮಟ್ಟಿನ ಹೋರಾಟ ಕೂಡ ನಡೆಯುತ್ತದೆ. ಕುಡಿಯುವ ನೀರಿನ ಅಭಾವ ಕೂಡ ಎದುರಾಗುತ್ತದೆ. ಆದರೆ ಈ ಬಾರಿ ವರುಣ ದೇವ ಅದಕ್ಕೆ ಅವಕಾಶ ನೀಡಲಿಲ್ಲ. ಪ್ರಾರಂಭದಲ್ಲೇ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು.

ನಾಲೆಗಳಿಗೆ ಹರಿದ ನೀರು

ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿರುವುದರಿಂದ ಈಗಾಗಲೇ ಕಳೆದ ಆರು ತಿಂಗಳಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸಲಾಗಿದೆ. ಅಲ್ಲದೆ ತಮಿಳುನಾಡಿಗೂ ಕೂಡ ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ನೀರು ಕೂಡ ಹರಿದುಹೋಗಿದೆ. ಅಲ್ಲದೆ ಜೂನ್ ವರೆಗೂ ಕುಡಿಯುವ ನೀರಿಗೂ ಯಾವುದೇ ತೊಂದರೆ ಕೂಡ ಇಲ್ಲ.

ಟೀಕಾಕಾರರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ಕೆಎಆರ್​ಎಸ್ ಜಲಾಶಯ ಹೊಸ ದಾಖಲೆ ಬರೆದಿರುವುದನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಟೀಕಾಕಾರರಿಗೆ ಟಕ್ಕರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರಲ್ಲ ಎಂದು ಟೀಕೆ ಮಾಡುತ್ತಿರುವವರು ಕೆಆರ್‌ಎಸ್ ನೋಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೈಸೂರು‌ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಮಾಡುತ್ತೀರಾ? ಎಚ್ಚರ

ಕೆಆರ್‌ಎಸ್ ಡ್ಯಾಂ ಕಟ್ಟಿದಾಗಿನಿಂದ ಇದೇ ಮೊದಲ ಬಾರಿಗೆ ಈ ವರ್ಷ ದಾಖಲೆ ನಿರ್ಮಾಣವಾಗಿದೆ. ಸತತ 156 ದಿನಗಳ ಕಾಲ ಕೆಆರ್‌ಎಸ್​​ನಲ್ಲಿ ಯಾವ ವರ್ಷವೂ ಗರಿಷ್ಠ ಮಟ್ಟ ನೀರಿರಲಿಲ್ಲ. ಇದೇ ಮೊದಲು ಇಷ್ಟು ದಿನ ಈ ಪ್ರಮಾಣದ ನೀರು ಇದೆ. ಕಾಂಗ್ರೆಸ್ ಬಂದಾಗಲೆಲ್ಲಾ ಬರಗಾಲ ಎಂದು ಟೀಕೆ ಮಾಡುತ್ತಿದ್ದರು. ಟೀಕೆ ಟಿಪ್ಪಣಿಗಳಿಗೆ ಇದು ಉತ್ತರ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 08, 2025 09:20 AM