ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಮಾಡುತ್ತೀರಾ? ಎಚ್ಚರ
ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಮಂಡ್ಯದಲ್ಲಿ ವಿನೋದ್ ಎಂಬುವವರ ಕಾರಿಗೆ ಮೊಟ್ಟೆ ಎಸೆದು ಅಡ್ಡಗಟ್ಟಿದ ದುಷ್ಕರ್ಮಿಗಳು, ಖಾರದ ಪುಡಿ ಎರಚಿ 55,000 ರೂಪಾಯಿ ದರೋಡೆ ಮಾಡಿದ್ದಾರೆ. ಪೊಲೀಸ್ ಗಸ್ತು ಹೆಚ್ಚಿಸಿದ್ದರೂ, ದರೋಡೆಗಳು ನಿಲ್ಲುತ್ತಿಲ್ಲ. ರಾತ್ರಿ ವೇಳೆ ಪ್ರಯಾಣಿಸುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಮಂಡ್ಯ, ಡಿಸೆಂಬರ್ 24: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳ ಬಗ್ಗೆ ಆಗಾಗ ವರದಿಯಾಗುತ್ತಿರುತ್ತದೆ. ಅದರಲ್ಲಿಯೂ ಎಕ್ಸ್ಪ್ರೆಸ್ ವೇಯ ಸರ್ವೀಸ್ ರಸ್ತೆಯಲ್ಲಿ ವಾಹನಗಳನ್ನು ತಡೆದು ದರೋಡೆ, ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ಬಳಿ ಕಾರಿಗೆ ಮೊಟ್ಟೆ ಎಸೆದ ದುಷ್ಕರ್ಮಿಗಳು, ನಂತರ ಚಾಲಕ ಕಾರು ನಿಲ್ಲಿಸಿದಾಗ ಆತನ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿದ್ದಾರೆ. ಸೋಮವಾರ ರಾತ್ರಿ ಘಟನೆ ನಡೆದಿದೆ.
ನಡೆದಿದ್ದೇನು?
ಬೆಲ್ಲದ ವ್ಯಾಪಾರಿಯಾಗಿರುವ ಮಂಡ್ಯದ ಗುತ್ತಲು ನಿವಾಸಿ ವಿನೋದ್, ಸೋಮವಾರ ರಾತ್ರಿ ಮದ್ದೂರಿನಲ್ಲಿ ವ್ಯಾಪಾರ ಮುಗಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಕಾರಿನ ಗಾಜಿಗೆ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದಾರೆ. ಇದರಿಂದಾಗಿ ವಿನೋದ್ ನಂತರ ಕಾರನ್ನು ನಿಲ್ಲಿಸಿದ್ದಾರೆ. ಆಗ ಕಾರಿನಲ್ಲಿದ್ದ ವಿನೋದ್‌ಗೆ ಖಾರದ ಪುಡಿ ಎರಚಿದ ಖದೀಮರು, ಅವರ ಬಳಿ ಇದ್ದ 55 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುತ್ತಿವೆ ಸುಲಿಗೆ, ದರೋಡೆ ಪ್ರಕರಣ
ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ಕೊನೆಗೊಂಡ ಬೆಳಗಾವಿ ಅಧಿವೇಶನದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿತ್ತು. ಇಂಥ ಸುಮಾರು 26 ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಸಚಿವರು ಪರಿಷತ್ನಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ, ರಾಮನಗರ ಜಿಲ್ಲೆಯಲ್ಲಿ 12 ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 14 ಪ್ರಕರಣಗಳು ದಾಖಲಾಗಿದ್ದವು.
ಈಗಾಗಲೇ ಎಕ್ಸ್ಪ್ರೆಸ್ ವೇ ಸರ್ವೀಸ್ ರಸ್ತೆಯ ವಿವಿಧೆಡೆಗಳಲ್ಲಿ ಪ್ರಯಾಣಿಕರ, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜತೆಗೆ, ಪೊಲೀಸ್ ಗಸ್ತು ಕೂಡ ಹೆಚ್ಚಿಸಲಾಗಿದೆ. ಅಷ್ಟಾಗಿಯೂ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಇದನ್ನೂ ಓದಿ: ಮಹಿಳೆ ವೇಲ್ ಎಳೆದಿದ್ದ ಕೇಸ್: 6 ವರ್ಷದ ನಂತ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತ ದೂರು
ಕೆಲವು ಕಡೆಗಳಲ್ಲಿ ಟೋಲ್ ತಪ್ಪಿಸುವುದಕ್ಕಾಗಿಯೂ ವಾಹನ ಸವಾರರು ಸರ್ವೀಸ್ ರಸ್ತೆಗಳಲ್ಲಿ ಪ್ರಯಾಣಿಸುತ್ತಾರೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ದರೋಡೆಕೋರರು, ಕಳ್ಳರು ನಿರ್ಜನ ಪ್ರದೇಶಗಳಲ್ಲಿದ್ದುಕೊಂಡು ಕೃತ್ಯ ಎಸಗುತ್ತಿದ್ದಾರೆ. ಹೀಗಾಗಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ, ಅದರಲ್ಲಿಯೂ ರಾತ್ರಿ ವೇಳೆ ಪ್ರಯಾಣಿಸುವ ವಾಹನ ಸವಾರರು ಸಾಕಷ್ಟು ಎಚ್ಚರ ವಹಿಸುವುದು ಉತ್ತಮ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ