ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಪೋಕ್ಸೋ ಕಾಯ್ದೆ (POCSO Act)ಯಡಿ ಬಂಧಿತರಾಗಿರುವ ಮುರುಘ ಮಠದ ಡಾ.ಶಿವಮೂರ್ತಿ ಶರಣರ (Shivamurthy Murugha Sharanaru) ಜಾಮೀನು ಅರ್ಜಿ ಕುರಿತ ಆದೇಶ ಇಂದು ಹೊರಬೀಳಲಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಆದೇಶ ಪ್ರಕಟಿಸಲಿದ್ದು, ಅದರಂತೆ ಶ್ರೀಗಳ ಭವಿಷ್ಯ ಇಂದು ನಿರ್ಧಾರಗಳ್ಳಲಿದೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮರುಘಾಶ್ರೀ ಅವರು ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಆಂಜಿಯೋಗ್ರಾಮ್ ಬಳಿಕ ಶ್ರೀಗಳ ಬಿಪಿ, ಸ್ಯಾಚುರೇಶನ್ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿರುವ ಹೃದಯ ತಜ್ಞ ಡಾ. ಮಹೇಶ್ ಮೂರ್ತಿ, ಡಾ. ಪರಮೇಶ್ವರ್ ಹೇಳಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣ ಹಿನ್ನೆಲೆ ಸಿಆರ್‌ಪಿಸಿ 91ರಡಿ ದಾಖಲೆ ಕೇಳಿದ್ದ ಎರಡು ಅರ್ಜಿಗಳು ವಜಾ ಮಾಡಲಾಗಿದೆ. ಎ4, ಎ5 ಪರ ವಕೀಲರು ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ, ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಇಂದು ಶ್ರೀಗಳ ಜಾಮೀನು ಅರ್ಜಿ ತೀರ್ತು ಹೊರಬೀಳಲಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಶ್ರೀ ಅವರಿಗೆ ಹೃದಯ ಸಮಸ್ಯೆ ಕಾಯಿಲೆ ಇರುವ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಚಿತ್ರದುರ್ಗ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ಸೂಚನೆ ನೀಡಿತ್ತು. ಅದರಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳು, ಇಂದು ಮುರುಘಾಶ್ರೀಗಳನ್ನ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.
ಶ್ರೀಗಳ ಕರೋನರಿ ಆ್ಯಂಜಿಯೋಗ್ರಾಮ್ ಯಶಸ್ವಿ ಹಿನ್ನೆಲೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಂಜಿಯೋಗ್ರಾಮ್ ನಂತರ ಕೆಲ ಅಡ್ಡಪರಿಣಾಮದ ಸಾಧ್ಯತೆ ಹಿನ್ನೆಲೆ 24 ಗಂಟೆಗಳ ಕಾಲ ಮುರುಘಾ ಶ್ರೀಗಳ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಮತ್ತೊಮ್ಮೆ ಶ್ರೀಗಳ ಆರೋಗ್ಯ ತಪಾಸಣೆ ಕೂಡ ನಡೆಸಲಾಗುತ್ತದೆ. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Fri, 23 September 22