ಬೆಂಗಳೂರು: ಎಸಿಬಿ ದಾಳಿ ವೇಳೆ ತಪ್ಪಿಸಿಕೊಳ್ಳಲು ಹೋಗಿ ಪೇದೆಯೊಬ್ಬರು ಕಾಲು ಮುರಿದುಕೊಂಡ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆರೋಪಿಗಳಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಗಡಿಬಿಡಿಗೊಂಡ ಕಾನ್ಸ್ಟೇಬಲ್ ಕುಮಾರ್ ಹಣ ಸಮೇತ ತಪ್ಪಿಸಿಕೊಳ್ಳಲು ಹೋದಾಗ ಕಾಲು ಮುರಿದುಕೊಂಡಿದ್ದಾರೆ.
ಮೊಬೈಲ್ ಕದ್ದ ಆರೋಪಿಗಳಿಂದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಬ್ ಇನ್ಸ್ಪೆಕ್ಟರ್ ಸೌಮ್ಯಾ, ಹೆಡ್ ಕಾನ್ಸ್ಟೇಬಲ್ ಜೆ.ಪಿ.ರೆಡ್ಡಿ ಈ ತೆರನಾದ ಬೇಡಿಕೆ ಇಟ್ಟಿದ್ದು, ಆರೋಪಿಗಳು ಲಂಚ ನೀಡಲು ಒಪ್ಪಿಕೊಂಡಿದ್ದಾರೆ. ಅದರಂತೆ, ಲಂಚ ಸ್ವೀಕರಿಸಿ ಅದನ್ನು ಕಾನ್ಸ್ಟೇಬಲ್ ಕುಮಾರ್ ಕೈಗೆ ನೀಡಿದ್ದ ವೇಳೆಯಲ್ಲೇ ಎಸಿಪಿ ಪ್ರತಾಪ್ ರೆಡ್ಡಿ ನೇತೃತ್ವದ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಎಸಿಬಿ ಅಧಿಕಾರಿಗಳನ್ನು ನೋಡಿ ಗಲಿಬಿಲಿಗೊಂಡ ಪೇದೆ ಕುಮಾರ್ ಹಣದ ಸಮೇತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ತಪ್ಪಿಸಿಕೊಳ್ಳುವಾಗ ಕಾಲು ಮುರಿದಿದ್ದು ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ PSI ಸೌಮ್ಯಾ ಹಾಗೂ ಹೆಡ್ ಕಾನ್ಸ್ಟೇಬಲ್ ಜೆ.ಪಿ.ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ACB ಬಲೆಗೆ
ಹೊಲದ ಪಹಣಿ ಪತ್ರದಲ್ಲಿ ಷರತ್ತು ತಿದ್ದುಪಡಿಗಾಗಿ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ನಡೆದಿದೆ. ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ ಎಂಬುವವರು ಪಹಣಿ ಪತ್ರ ತಿದ್ದುಪಡಿಗಾಗಿ ಕೃಷ್ಣ ವಿಠ್ಠಲ ಕುಲಕರ್ಣಿ ಎಂಬ ರೈತನಿಂದ ₹5ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಎಂ.ಕೆ.ಗಂಗಲ್ ನೇತೃತ್ವದ ತಂಡ ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಲಾಗಿದೆ.
ಲಂಚ ಸ್ವೀಕರಿಸುತ್ತಿದ್ದ ಸಮಾಜ ಕಲ್ಯಾಣಾಧಿಕಾರಿ ಎಸಿಬಿ ಬಲೆಗೆ
ಚಿತ್ರದುರ್ಗ: ಲಂಚ ಸ್ವೀಕರಿಸುತ್ತಿದ್ದ ಸಮಾಜ ಕಲ್ಯಾಣ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿ ಬಲೆಗೆ ಬಿದ್ದಿದ್ದಾರೆ. ತಾಲೂಕಿನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಹಾಗೂ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಶ್ರೀನಿವಾಸ್ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ನೀಡಲು, ಶಿವಪ್ಪ ಎಂಬವರಿಂದ 10,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ, ಎಸಿಬಿ ಡಿವೈಎಸ್ಪಿ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆಗ, ಸಮಾಜ ಕಲ್ಯಾಣ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ದಾಳಿ: ₹ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ
Published On - 6:47 pm, Tue, 12 January 21