ರಾಯಚೂರು: ಬಂಧಿಖಾನೆಗಳಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಕಳೆದ ಮಾರ್ಚ್ನಿಂದ ಸಂಬಂಧಿಕರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ, ರಾಜ್ಯ ಸರ್ಕಾರ ಇ-ಮುಲಾಕಾತ್ ವ್ಯವಸ್ಥೆಯಡಿ ಆನ್ಲೈನ್ ಮೂಲಕ ವಿಚಾರಣಾಧೀನ ಖೈದಿಗಳು ಕುಟುಂಬದ ಸದಸ್ಯರ ಜತೆಗೆ ಸಮಾಲೋಚನೆ ನಡೆಸುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಬಿಸಿಲನಾಡು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಸರ್ಕಾರದ ನಿಯಮಾವಳಿಗಳ ಅನುಸಾರ ಅನುಷ್ಠಾನಗೊಳಿಸಲಾಗಿದೆ.
ಖೈದಿಗಳನ್ನು ಸಂಪರ್ಕಿಸಲು ಏನು ಮಾಡಬೇಕು?
ಸಂಬಂಧಿಗಳು ಇ-ಮುಲಾಕಾತ್ ಆ್ಯಪ್ ಡೌನ್ಲೌಡ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ಒದಗಿಸಬೇಕು. ಕಾರಾಗೃಹ ಇಲಾಖೆಯು ಸಂಬಂಧಿಕರ ಮೊಬೈಲಿಗೆ ಒಟಿಪಿ ಕಳಿಸಿ ನೋಂದಣಿ ಮಾಡುತ್ತದೆ. ಎಂದು? ಯಾವ ಸಮಯಕ್ಕೆ ಅವರು ಬಂಧಿತ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಲು ಅವಕಾಶ ದೊರೆಯುತ್ತದೆ ಎಂಬ ಮಾಹಿತಿ ಕುಟುಂಬದವರಿಗೆ ರವಾನೆಯಾಗುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಕಾರಾಗೃಹದಲ್ಲಿರುವ ವ್ಯಕ್ತಿಯನ್ನು ಜಿಲ್ಲಾ ಕಾರಾಗೃಹದ ಹಿರಿಯ ಅಧಿಕಾರಿಗಳು ಲ್ಯಾಪ್ಟಾಪ್ ಬಳಿ ಕರೆತರುತ್ತಾರೆ. ಈ ಮೂಲಕ ಕುಟುಂಬದವರನ್ನು ವರ್ಚುವಲ್ ಆಗಿ ಜೈಲುಹಕ್ಕಿಗಳನ್ನು ಭೇಟಿ ಆಗಬಹುದು.
ಮಾನಸಿಕ ಒತ್ತಡ ನಿವಾರಣೆ
ಕಳೆದ 9 ತಿಂಗಳಿಂದ ಕುಟುಂಬದ ಸದಸ್ಯರ ಸಂಪರ್ಕ ಕಳೆದುಕೊಂಡು ಮಾನಸಿಕವಾಗಿ ಒತ್ತಡದಲ್ಲಿರುವ ಖೈದಿಗಳಿಗೆ ಇ-ಮುಲಾಕಾತ್ ನೆರವಾಗುತ್ತಿದೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 171 ಖೈದಿಗಳಿದ್ದಾರೆ. ಈ ಪೈಕಿ 164 ಮಂದಿ ಪುರುಷರು ಮತ್ತು 7 ಮಹಿಳೆಯರು. ತಮ್ಮ ಸಂಬಂಧಿಕರ ಭೇಟಿಗೆ ಬ್ರೇಕ್ ಬಿದ್ದಿದ್ದರಿಂದ ಅನೇಕರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಇಂಥವರಿಗೆ ಒ-ಮುಲಾಕಾತ್ ನೆರವಾಗಿದೆ. ದೇಶದ ನಾನಾ ಕಡೆಗೆ ಎರಡನೇ ಅಲೆಯಲ್ಲಿ ಸೊಂಕು ಹರಡುತ್ತಿರುವ ಮಾತು ವ್ಯಾಪಕವಾಗಿದೆ. ಚಳಿಗಾಲದಲ್ಲಿ ಇದರ ತೀವ್ರತೆ ಹೆಚ್ಚಾಗುವ ಭೀತಿಯು ಎದುರಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಕಾರಾಗೃಹದಲ್ಲಿರುವ ಬಂಧಿಗಳಿಗೆ ಅವರ ಕುಟುಂಬದರವನ್ನು ಸಂಪರ್ಕಿಸಲು ಈ ಮುಲಾಕಾತ್ ಆ್ಯಪ್ ಸಹಕಾರಿಯಾಗಿದೆ.
ಸರ್ಕಾರದ ಸೂಚನೆಗಳ ಅನ್ವಯ ಇ-ಮುಲಾಕಾತ್ ಮೂಲಕ ಜೈಲುಹಕ್ಕಿಗಳಿಗೆ ಅವರ ಕುಟುಂಬದವರೊಂದಿಗೆ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ಸರ್ಕಾರದ ಆದೇಶದಂತೆ ರಾಯಚೂರು ಜಿಲ್ಲಾ ಕಾರಾಗೃಹದಲ್ಲೂ ಈ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಜೈಲು ಅಧೀಕ್ಷಕರಾದ ಬಿ.ಆರ್.ಅಂದಾನಿ.