ನಾಳೆ ಪುನೀತ್​ ರಾಜ್​ಕುಮಾರ್​ಗೆ​ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್

| Updated By: Rakesh Nayak Manchi

Updated on: Oct 31, 2022 | 2:33 PM

ನಾಳೆ ಪುನೀತ್​ ರಾಜ್​ಕುಮಾರ್​ಗೆ​ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ತಮಿಳು ನಟ ರಜನೀಕಾಂತ್, ತೆಲುಗು ನಟ ಜೂ.ಎನ್​ಟಿಆರ್ ಭಾಗಿಯಾಗಲಿದ್ದಾರೆ.

ನಾಳೆ ಪುನೀತ್​ ರಾಜ್​ಕುಮಾರ್​ಗೆ​ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್
ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ
Follow us on

ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ಗೆ ನಾಳೆ​ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Award) (ಮರಣೋತ್ತರ) ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಅವರು ಸ್ವೀಕಾರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಹಾಗೂ ಕಂದಾಯ ಇಲಾಖೆ ಸಚಿವ ಆರ್​.ಅಶೋಕ್ (R.Ashok), ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 20 ಸಾವಿರ ಜನ ಸೇರುವ ಸಾಧ್ಯತೆ ಇದ್ದು, ಸೂಪರ್​​ಸ್ಟಾರ್​ ರಜಿನಿಕಾಂತ್ (Super star Rajinikanth), ಜ್ಯೂ.ಎನ್​ಟಿಆರ್ (Jr. NTR) ಆಗಮಿಸುತ್ತಿದ್ದಾರೆ. ಸಿನಿ ಗಣ್ಯರು, ಬೆಂಗಳೂರಿನ ನಾಗರಿಕರಿಗೆ 5 ಸಾವಿರ ಪಾಸ್ ವಿತರಣೆ ಮಾಡಲಾಗುತ್ತಿದ್ದು, ಇಂದು ನಟ ಪುನೀತ್ ರಾಜ್​ಕುಮಾರ್​​​ ನಿವಾಸಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂದರು. ವಿಧಾನಸೌಧದ ಎದುರು ನಾಳೆ ಸಂಜೆ 4 ಗಂಟೆಗೆ ಈ ಸಮಾರಂಭ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಬ್ಲಾಕ್ ಮಾಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರ ಆಗಮನ

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಸೂಪರ್​ ಸ್ಟಾರ್ ರಜಿನಿಕಾಂತ್, ಟಾಲಿವುಡ್ ನಟ ಜ್ಯೂ.ಎನ್​ಟಿಆರ್, ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರು ವಿಶೇಷ ಆಹ್ವಾನಿತರಾಗಿದ್ದಾರೆ. ಸಂಜೆ 5 ಗಂಟೆಗೆ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ರಘುನಾಥ ಮಲ್ಕಾಪುರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್​, ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ಅಶೋಕ್​, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್​ ಅರ್ಷದ್ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಗಾಯಕ ವಿಜಯಪ್ರಕಾಶ್ ಅವ​ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಆಹ್ವಾನಿತರಿಗೆ ರಾಜ್ಯ ಸರ್ಕಾರದಿಂದ ಶಿಷ್ಟಾಚಾರ

ನಾಳೆ ಬೆಂಗಳೂರಿಗೆ ಆಗಮಿಸಲಿರುವ ಸೂಪರ್​ಸ್ಟಾರ್​ ರಜಿನಿಕಾಂತ್​ ಅವರು ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ಉಳಿದುಕೊಳ್ಳಲಿದ್ದು, ಜೂ. ಎನ್​ಟಿಆರ್ ಅವರು ತಾಜ್​ವೆಸ್ಟೆಂಡ್​ ಹೋಟೆಲ್​ನಲ್ಲಿ ಉಳಿದುಕೊಳ್ಳಲಿದ್ದಾರೆ. ಹೋಟೆಲ್​ನಿಂದ ರಾಜ್ಯ ಶಿಷ್ಟಾಚಾರದ ಮೂಲಕ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ನಾಳೆ ರಜನೀಕಾಂತ್ ಸಿನಿಮಾದ ಚಿತ್ರೀಕರಣ ನಿಗದಿಯಾಗಿದ್ದ ಕಾರಣ ಕಾರ್ಯಕ್ರಮಕ್ಕೆ ಆಗಮಿಸುವುದು ಬಹುತೇಕ ಅನುಮಾನವಾಗಿತ್ತು. ಹೀಗಾಗಿ ಕರ್ನಾಟಕ ಸರ್ಕಾರವು ರಜನೀಕಾಂತ್ ಅವರು ನಟಿಸುತ್ತಿರುವ ನಿರ್ಮಾಪಕರ ಜೊತೆ ಚರ್ಚೆ ನಡೆಸಿದೆ. ಬಳಿಕ ರಜನೀಕಾಂತ್ ಕಾರ್ಯಕ್ರಮಕ್ಕೆ ಬರುವುದು ಖಚಿತವಾಗಿದೆ.

ಕರ್ನಾಟಕ ಸರ್ಕಾರದ ಆಹ್ವಾನಕ್ಕೆ ತಕ್ಷಣವೇ ಒಪ್ಪಿಕೊಂಡ ಜೂನಿಯರ್ ಎನ್​ಟಿಅರ್, ನಾಳೆ ಬೆಂಗಳೂರಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನೊಂದೆಡೆ ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿರುವ ಸುಧಾ ಮೂರ್ತಿ ಅವರು ನಾಳೆ ಸಂಜೆ ಪ್ರಧಾನಿ ಜೊತೆ ವೀಡಿಯೋ ಕಾನ್ಫರೆನ್ಸ್​ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ವೀಡಿಯೋ ಕಾನ್ಫರೆನ್ಸ್ ಸಮಯದಲ್ಲಿ ಬದಲಾವಣೆ ಮಾಡಿಕೊಂಡು ಪ್ರಶಸ್ತಿ ಪ್ರದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Mon, 31 October 22